ಗುರುವಾರ, ಅಕ್ಟೋಬರ್ 28, 2010

ಮಗುವ ನಗುವಿರಲವ್ವ ಮನದ ತುಂಬಾ.....


Courtesy - http://umic.miami.edu/

ಕೆಲವು ವರ್ಷಗಳ ಹಿಂದಿನ ಮಾತು. ಪೂಜೆಗೆಂದು ಕರೆದಿದ್ದ ಆತ್ಮೀಯರ ಮನೆಗೆ ಹೋಗಿದ್ದೆ. ಸಮಾರಂಭ ಎಂದ ಮೇಲೆ ನೂರು ಮಾತು, ಹರಟೆ, ಕುಶಲೋಪರಿ, ಕೊಂಚ ಗಾಸಿಪ್ ಇದ್ದಿದ್ದೇ. ನಾನೋ ಅಲ್ಲೇ ಆಡುತ್ತಿದ್ದ ಪುಟ್ಟ ಮಕ್ಕಳ ಹಿಂಡಿನ ಹಿಂದೆ ಬಿದ್ದು ಅವರ ನೈಜ ಸಂತೋಷವನ್ನೇ ಕಣ್ತುಂಬಿಕೊಳ್ಳತೊಡಗಿದ್ದೆ. ೫-೬ ಮಕ್ಕಳ ಆ ಗುಂಪಿನಲ್ಲಿ ಓರ್ವ ಹುಡುಗ ಮಾತ್ರ ತುಸು ಹೆಚ್ಚು ತುಂಟನಾಗಿದ್ದ. ಜೊತೆಯಲ್ಲಿ ಆಡುತ್ತಿರುವವರನ್ನು ವಿನಾಕಾರಣ ಸ್ವಲ್ಪ ದೂಕುವುದು, ಕಾಣದಂತೇ ಚಿವುಟುವುದು, ಜಡೆ ಎಳೆದು ಓಡುವುದು ಮಾಡುತ್ತಿದ್ದ. ಅವನ ತುಂಟಾಟದಿಂದ ಬೇಸತ್ತ ಇತರ ಮಕ್ಕಳು ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಮಾತೊಳಗೆ ಮುಳುಗಿದ್ದ ಅವನ ತಾಯಿಗೆ ದೂರೊಯ್ದರು. ಅಮ್ಮನ ಹುಸಿಮುನಿಸಿಗೂ ಜಗ್ಗದ ಆ ನಾಲ್ಕು ವರುಷದ ಪೋರ ಉಳಿದ ಮಕ್ಕಳಿಗೆಲ್ಲಾ ನಾಲಿಗೆ ತೋರಿಸಿ ಚಾಳಿಸಿ ಓಡಿ ಮರೆಯಾದ. ಆಗ ಆ ಗುಂಪಿನಲ್ಲೇ ಇದ್ದ ಸುಮಾರು ೩೫ ವರುಷದ ಗೃಹಿಣಿಯೋರ್ವರು "ನಿಮ್ಮ ಮಗ ತುಂಬಾ ತುಂಟ ಇದ್ದಾನಲ್ಲ....ಅಬ್ಬಾ ಹೇಗೆ ಸಂಭಾಳಿಸುತ್ತೀರೋ ಏನೋ... ಈಗಿನ ಮಕ್ಕಳೆಲ್ಲಾ ಹೀಗೇ ಎಂದೆನಿಸುತ್ತದೆ. ಆದರೆ ಇವನು ಬಹಳ ಜೋರಿದ್ದಾನೆ ಎಂದೆನಿಸುತ್ತದೆ. ಕಷ್ಟವಾಗುತ್ತಿರಬೇಕು ನಿಮಗೆ ಅಲ್ಲವೇ?" ಎಂದು ಸಹಜವಾಗಿ ಕೇಳಿದರು. ಅದೇನನಿಸಿತೋ ಆ ತಾಯಿಗೆ ಮುಖ ಊದಿಸಿಕೊಂಡು "ಅಯ್ಯೋ ಇವತ್ತೇ ಇಲ್ಲೇ ಹೀಗೆಲ್ಲಾ ಆಡ್ತಿರೋದು. ಇಲ್ದೇ ಹೋದ್ರೆ ಅವ್ನು ತುಂಬಾ ಜಾಣ ಹುಡ್ಗ. ನನ್ನ ಮಾತನ್ನು ಸ್ವಲ್ಪವೂ ಮೀರೊಲ್ಲ...ಹಾಗೆ ನೋಡಿದ್ರೆ ಇಷ್ಟೂ ತುಂಟಾಟ ಮಾಡದಿದ್ದರೆ ಮಕ್ಕಳು ಅನ್ನೋದು ಯಾಕೆ?" ಎಂದು ತುಸು ಬಿಗಿಯಾಗಿ ಉತ್ತರಿಸಲು, ಆ ಗೃಹಿಣಿಗೂ ತುಸು ಪಿಚ್ಚೆನಿಸಿರಬೇಕು. ಅಲ್ಲಿಂದ ಮೆಲ್ಲನೆ ಜಾರಿಕೊಂಡು ಬೇರೆಲ್ಲೋ ನಡೆದರು. ಆದರೆ ಆಕೆ ಅತ್ತ ಹೋಗಿದ್ದೇ ತಡ ಆ ಹುಡುಗನ ತಾಯಿ ಜೊತೆಯಲ್ಲಿದ್ದ ಇತರ ಗೆಳತಿಯರನುದ್ದೇಶಿಸಿ "ಇವರಿಗೇನು ಗೊತ್ತು ಮಕ್ಕಳ ಕಷ್ಟ? ಅವರ ತುಂಟಾಟ? ಹೆತ್ತವರಿಗೆ ತಾನೇ ಗೊತ್ತಾಗುವುದು ಮಕ್ಕಳನ್ನು ಸಾಕುವುದರ ಸಂಕಟ? ಹೊರಲಿಲ್ಲ ಹೆರಲಿಲ್ಲ.. ದೊಡ್ಡದಾಗಿ ಹೇಳೋಕೆ ಬಂದ್ಬಿಟ್ರು ಮಕ್ಕಳ ಸ್ವಭಾವದ ಬಗ್ಗೆ..."ಎಂದು ಇನ್ನೂ ಏನೇನೋ ವಟಗುಡುತ್ತಲೇ ಇದ್ದರು. ಜೊತೆಗಿದ್ದವರು ಇಷ್ಟ ಇದ್ದೋ ಇಲ್ಲದೆಯೋ ಹೌದು ಬಸವಣ್ಣ ಹೌದು ಅಲ್ಲ ಬಸವಣ್ಣ ಅಲ್ಲಾ... ಎನ್ನುವಂತೆ ಗೋಣಾಡಿಸುತ್ತಾ ಬಿಮ್ಮನೆ ಕುಳಿತಿದ್ದರು. ನನಗೆ ಮಾತ್ರ ಅಸಾಧ್ಯ ಸಿಟ್ಟು, ಬೇಸರವಾಯಿತು ಅವರ ಹೀಯಾಳಿಕೆಯನ್ನು ಹಾಗೂ ಹಿಂದಿನಿಂದ ಆಡಿಕೊಂಡ ಮಾತುಗಳನ್ನು ಕೇಳಿ.

ಹೆತ್ತವರಿಗೆ ಮಾತ್ರ ಮಕ್ಕಳನ್ನು ಸಾಕುವ ಕಷ್ಟ ಗೊತ್ತಾಗುವುದು.. ಮಕ್ಕಳಿಲ್ಲದವರಿಗೆ ಅವರನ್ನು ಸಾಕುವ ಪ್ರಯಾಸ, ನೋವು ಅರ್ಥವಾಗೊಲ್ಲ... ಎನ್ನುವುದು ಕೇವಲ ಏಕಮುಖ ಅಭಿಪ್ರಾಯ. ಹಾಗೆ ನೋಡಿದರೆ ಮಕ್ಕಳಿದ್ದವರಿಗೆಂದೂ ತಾಯ್ತನದ ಭಾಗ್ಯವನ್ನು ಕಾಣದವರ ವೇದನೆ, ಅಸಹನೆ ಅರ್ಥವೇ ಆಗದು. ಈ ಒಂದು ಸೂಕ್ಷ್ಮತೆ ಅರ್ಥವಾಗದಿರುವವರು ತಮ್ಮಂತೇ ಹೆಣ್ಣಾಗಿರುವ, ತಾಯ್ತನದಿಂದ ವಂಚಿತರಾದವರನ್ನು ಬಂಜೆ, ಬರಡು, ಕೊರಡು, ಪೂರ್ವಜನ್ಮದ ಪಾಪದಿಂದಾಗಿಯೇ ಈಗ ಅನುಭವಿಸುತ್ತಿರುವವಳು- ಎಂದೆಲ್ಲಾ ಹೀಯಾಳಿಸಿ ಮತ್ತಷ್ಟು ಹಿಂಸೆ ನೀಡುತ್ತಾರೆ. ಸಂತಾನವಿಹೀನರಾಗಲು ಹೆಣ್ಣೊಂದೇ ಕಾರಣಳಾಗಿರಬೇಕೆಂದಿಲ್ಲ, ಗಂಡೂ ಕಾರಣನಾಗಿರಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ, ಕೇವಲ ಆಕೆಯನ್ನು ಮಾತ್ರ ದೂಷಿಸುತ್ತಾರೆ. ಕಾಲ ಎಷ್ಟೇ ಬದಲಾಗಿರಲಿ, ವಿಜ್ಞಾನ ಎಷ್ಟೇ ಮುಂದುವರಿದಿರಲಿ, ನಮ್ಮಲ್ಲಿ ಮಾತ್ರ ಇಂದಿಗೂ ಈ ಒಂದು ಪಿಡುಗು ಸ್ತ್ರೀಯನ್ನು ಬಿಟ್ಟಿಲ್ಲ. ಮಕ್ಕಳಾಗದಿರಲು ಆಕೆಯೊಳಗಿನ ಕೊರತೆಯೇ ಕಾರಣ ಎಂಬ ತೀರ್ಮಾನಕ್ಕೆ ಬಹುಬೇಗ ಬಂದುಬಿಡುತ್ತದೆ ನಮ್ಮ ಸಮಾಜ!

ಮೊದಲು ನಾನೊಂದು Infertility Centreನಲ್ಲಿ ಕೆಲಸಮಾಡುತ್ತಿದ್ದೆ.(ಹೆಸರು, ಊರು, ಇತ್ಯಾದಿ ವಿವರಗಳನ್ನು ಅಲ್ಲಿಯ ಗೌಪ್ಯತೆಯ ದೃಷ್ಟಿಯಿಂದ ಉಲ್ಲೇಖಿಸಲಾರೆ.) ಅಲ್ಲಿಗೆ ಬರುತ್ತಿದ್ದ ದಂಪತಿಯ ಮ್ಲಾನವದನ, ನೋವು, ಅದರಲ್ಲೂ ವಿಶೇಷವಾಗಿ ಚಿಂತಾಕ್ರಾಂತ ಮುಖ ಹೊತ್ತ ಸ್ತ್ರೀಯರು, ಇವರನ್ನೆಲ್ಲಾ ನೋಡಿದಾಗ ಅನಿಸಿದ್ದು ಒಂದೇ. ಮಕ್ಕಳಾಗಲಿಲ್ಲ ಎಂದು ಕೊರಗುತ್ತಾ ಅದರಲ್ಲೇ ದಿನೇ ದಿನೇ ಕುಗ್ಗುತ್ತಿರುವ ಇವರ ದುಃಖದಲ್ಲಿ ನಾವೆಷ್ಟು ಭಾಗಿಗಳಾಗಲು ಸಾಧ್ಯ ಎಂದು! ಭಾಗಿಯಾಗುವುದು ಬೇಡ.... ಅವರ ನೋವನ್ನು, ದುಃಖವನ್ನು ಮತ್ತಷ್ಟು ಹೆಚ್ಚಿಸದಿರುವಂತೆ ವರ್ತಿಸಿದರೆ ಸಾಕಲ್ಲಾ. ಆದರೆ ಆ ಫರ್ಮ್‌ನಲ್ಲೇ ಕೆಲಸ ಮಾಡುತ್ತಿದ್ದ ಕೆಲವು ನರ್ಸ್‌ಗಳು, ಆಯಾಗಳು ಹಿಂದಿನಿಂದ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ರೀತಿ, ವರ್ತನೆಗಳು ತುಂಬಾ ಸಂಕಟಕ್ಕೀಡುಮಾಡುತ್ತಿತ್ತು. ಒಂದು ತರಹದ ಉಸಿರುಗಟ್ಟಿದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು. ಎಷ್ಟೋ ಸಲ ಆಯಾಗಳಿಗೆ ಮೆಲುವಾಗಿ ತಿಳಿ ಹೇಳಲು ಹೋಗಿ ನಾನೇ ಹೇಳಿಸಿಕೊಂಡದ್ದಿದೆ. ಆದರೆ ತಿರುಗಿ ನನಗೆ ಅವೆಲ್ಲಾ ಬೌನ್ಸ್ ಆಗ ತೊಡಗಿದ ಮೇಲೆ ಇಲ್ಲದ ಸಹನೆ ಹೊಂದಲೇ ಬೇಕಾಯಿತು. ನನ್ನ ಬಹು ಪರಿಚಿತರ ಆಗ್ರಹದ ಮೇಲೆ ಅಲ್ಲಿ ಸೇರಿದ್ದ ನಾನು ಅವರ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಹೇಗೋ ೬ ತಿಂಗಳುಗಳನ್ನು ಸವೆಸಿ ಆನಂತರ ಇರಲಾಗದೇ, ಮುಲಾಜಿಲ್ಲದೇ ಹೊರ ಬಂದುಬಿಟ್ಟೆ.

ಅಸಲಿಗೆ ನನಗೆ ಸಂತಾನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದ ದಂಪತಿಯನ್ನು "ಪೇಷೆಂಟ್" ಎಂದು ಸಂಬೋಂಧಿಸುವುದೇ ಅಸಂಬದ್ಧ ಎಂದೆನಿಸುತ್ತಿತ್ತು. ಅವರ ಕೇಸ್ ಹಿಸ್ಟರಿಗಳನ್ನು, ಮೆಡಿಸಿನ್ಸ್ ಹಿಸ್ಟರಿಗಳನ್ನು, ಸಮಸ್ಯೆಗಳ ರೆಕಾರ್ಡ್ಗಳನ್ನು, ಕೊಡುತ್ತಿರುವ ಚಿಕಿತ್ಸೆಗಳ ವಿವರಗಳನ್ನು ಎಲ್ಲವನ್ನೂ ಪ್ರೋಗ್ರಾಮಿಂಗ್ ಮೂಲಕ ಜೋಡಿಸಿಡುವ ಕಾರ್ಯ, ಸಕಾಲದಲ್ಲಿ ಅದನ್ನು ಬೇಕಾದವರಿಗೆ ಒದಗಿಸಿ, ಮಾಹಿತಿಗಳನ್ನು ಒದಗಿಸುವ ಕಾರ್ಯ, ಹಾಗೆಯೇ ಒಮ್ಮೊಮ್ಮೆ(ನಾನೂ ಈ ವಿಷಯವನ್ನು ತುಸು ಅಭ್ಯಸಿಸಿದ್ದರಿಂದ) ಅವರನ್ನು ಹಿತವಾಗಿ ಮಾತನಾಡಿಸಿ, ಮನಸೊಳಗಿನ ಟೆನ್ಷನ್ ಹಾಗೂ ಕಳವಳಗಳನ್ನು ದೂರಮಾಡುವ ಕೆಲಸಗಳನ್ನೂ ಮಾಡುತ್ತಿದ್ದೆ. (ಅಲ್ಲೇ ಕೆಲಸ ಮಾಡುತ್ತಿದ್ದ ಪ್ರಧಾನ ಕೌನ್ಸಲರ್ ನನ್ನ ಆತ್ಮೀಯ ಫ್ರೆಂಡ್ ಆಗಿದ್ದರು. ಅವರು ನನಗೆ ಸ್ವಲ್ಪ ದಿನ ಟ್ರೈನಿಂಗ್ ಕೊಟ್ಟು ಆಮೇಲೆ ಅವರು ತುಂಬಾ ಬ್ಯುಸಿ ಇದ್ದಾಗ ಕೆಲವೊಂದು ಸಲ ನನಗೂ ಕೆಲಸ ಕೊಡುತ್ತಿದ್ದರಷ್ಟೇ). ಆದರೆ ಸರಿ ಸುಮಾರು ಅರ್ಧವರ್ಷಗಳವರೆಗೆ ಅಲ್ಲೇ ಕೆಲಸಮಾಡಿದ್ದರಿಂದ, ಹಲವಾರು ತರಹದ ಸಮಸ್ಯೆಗಳನ್ನು, ಸಂತಾನವಿಹೀನತೆಗೆ ಇರಬಹುದಾದ ಕಾರಣಗಳು ಹಾಗೂ ಮೆಡಿಕಲ್ ಪರಿಹಾರಗಳನ್ನು ಅಭ್ಯಸಿಸುವ ಸದವಕಾಶ ನನ್ನದಾಯಿತು. ಆ ಮಟ್ಟಿಗೆ ನಾನು ಆ ಸಂಸ್ಥೆಗೆ ಹಾಗೂ ನನ್ನ ಅಲ್ಲಿಗೆ ಬರಲು ಪ್ರೇರೇಪಿಸಿದ ಆ ಹಿತೈಷಿಗಳಿಗೆ ಸದಾ ಋಣಿ. ಅಂತಹ ಒಂದು ಫರ್ಮ್ನಲ್ಲಿ ಕೆಲಸಮಾಡುವಾಗ ನಮ್ಮೊಳಗೇ ನಾವು ತೆಗೆದುಕೊಳ್ಳ ಬೇಕಾಗಿರುವ ಮೊದಲ ಪ್ರತಿಜ್ಞೆ ಎಂದರೆ ಎಂದೂ ಎಲ್ಲೂ ಅದರೊಳಗಿನ, ಹಾಗೂ ಅಲ್ಲಿಗೆ ಬರುವ ಯಾರ ಕುರಿತೂ ಸಾರ್ವಜನಿಕವಾಗಿ ಮಾತಾಡಬಾರದು. ಗೌಪ್ಯತೆಯನ್ನು ಕಾಪಾಡುವಲ್ಲಿ ಬದ್ಧರಾಗಿರಬೇಕು. ಅದಕ್ಕಾಗಿ ನಾನು ಅಲ್ಲಿಯ ಕೆಲಸ ಕಾರ್ಯಗಳ ಕುರಿತಾಗಲೀ, ಕುಂದು ಕೊರತೆಗಳ ಬಗ್ಗೆಯಾಗಲೀ ಏನನ್ನೂ ಹೇಳಲಾರೆ. ಹೇಳುವುದೂ ಸಲ್ಲ. ಆದರೆ ಸಂತಾನವಿಹೀನತೆಯಿಂದುಂಟಾಗುವ ಸಾಮಾಜಿಕ, ಮಾನಸಿಕ ಸಮಸ್ಯೆಗಳು ಹಾಗೂ ಅದಕ್ಕೆ ಈಗಿರುವ ಪ್ರಮುಖ ವೈಜ್ಞಾನಿಕ ಪರಿಹಾರಗಳನ್ನಷ್ಟೇ ಹೇಳುತ್ತಿದ್ದೇನೆ.  ಅಂತೆಯೇ ಇಲ್ಲಿ ನಾನು ಹೇಳುತ್ತಿರುವುದು ಸರಳ ಭಾಷೆಯಲ್ಲಿ. ಕಾರಣ ತೀರ ಮೆಡಿಕಲ್ ಭಾಷೆಯಲ್ಲಿ ಹೇಳಲು ನನಗೆ ಬರದು. ನಾನು ಅದನ್ನು ಕಲಿತೂ ಇಲ್ಲ. ಅಲ್ಲಿ ನಾನು ಕಲಿತುಕೊಂಡ ಹಾಗೂ ಸ್ವಯಂ ಆಸಕ್ತಿಯಿಂದ ಪುಸ್ತಕಗಳನ್ನು ಅಭ್ಯಸಿಸಿ ತಿಳಿದುಕೊಂಡ ಕೆಲವು ವಿಷಯಗಳನ್ನಷ್ಟೇ ಹೇಳುತ್ತಿದ್ದೇನೆ. ನಾನಿಲ್ಲಿ ಹೇಳಿರುವ ವಿಷಯಗಳಲ್ಲಿ ಏನಾದರೂ ತಪ್ಪಿದ್ದಲ್ಲಿ ನಿಸ್ಸಂಕೋಚವಾಗಿ ತಿಳಿದವರು ತಿಳಿಸಬೇಕಾಗಿ ವಿನಂತಿ. ಇದರಿಂದ ಕಲಿಕೆಗೆ ಹಾಗೂ ಜ್ಞಾನರ್ಜನೆಗೆ ಎಲ್ಲರಿಗೂ ಸುಲಭವಾಗುವುದು.

ಅಸಲಿಗೆ ಈ ಒಂದು ಸಮಸ್ಯೆಯಿಂದ ಕೊರಗುತ್ತಿರುವವರು ಇಂತಹ ಫರ್ಮ್‌ಗೆ ಬಂದು ಚಿಕಿತ್ಸೆ ಪಡೆಯುವುದೂ ಒಂದು ಅವಮಾನಕರ, ನಾಚಿಕೆಗೇಡಿನ ವಿಷಯವೆಂದು ತುಂಬಾ ತಪ್ಪಾಗಿ ಭಾವಿಸಿರುತ್ತಾರೆ. ಇದರಿಂದಾಗಿಯೇ ಬಹಳಷ್ಟು ಸಮಯವನ್ನು ಹಾಳುಮಾಡಿಕೊಂಡು, ವಯಸ್ಸು ಹೆಚ್ಚಾದಂತೇ ಪರಿಹಾರವೂ ಕ್ಲಿಷ್ಟವಾಗುವುದೆಂದು ತಿಳಿಯದೇ ಮನದಲ್ಲೇ ನರಳುತ್ತಾ, ಅಂತಿಮವಾಗಿ ಬಂದಿರುತ್ತಾರೆ (ಹೆಚ್ಚಿನವರು). ಅಂತಹವರಿಗೆ ಚಿಕಿತ್ಸೆ ಕೊಡುವ ಮೊದಲು ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸಿ ಚಿಕಿತ್ಸೆಗೆ ತಯಾರುಮಾಡುವುದೇ ಒಂದು ಸವಾಲು. ಆದರೂ ಅದೆಷ್ಟೋ ದಂಪತಿಗಳು ಅರ್ಧದಲ್ಲೇ ಹಿಂತಿರುಗುವುದೂ ಇದೆ. ಜನ ಏನೆನ್ನುತ್ತಾರೋ? ಸಮಾಜ ಏನೆನ್ನುತ್ತದೆಯೋ? ನಾವಿಲ್ಲಿ ಬಂದಿದ್ದು ಗೊತ್ತಾದರೆ ನಮ್ಮ ಗುಟ್ಟು ಎಲ್ಲಿ ಎಲ್ಲರಿಗೂ ಗೊತ್ತಾಗುವುದೋ? ಎಂಬೆಲ್ಲಾ ಆತಂಕಗಳಿಂದ, ಗೊಂದಲಗಳಿಂದ ಮೂಲ ಸಮಸ್ಯೆಯನ್ನೇ ಮರೆಯುತ್ತಾರೆ. ಇಂತಹವರಿಗೆ ಮೊದಲು ಬೇಕಾಗಿರುವುದು ಗೌಪ್ಯತೆಯ ಆಶ್ವಾಸನೆ ಹಾಗೂ ಮನದೊಳಗೆ ಆತ್ಮವಿಶ್ವಾದ ಮೊಳಕೆ. ಆಗ ಅರ್ಧ ಸಮಸ್ಯೆ ಅಲ್ಲೇ ಪರಿಹಾರವಾದಂತೇ. ಅವರ ಸೂಕ್ಷ್ಮ ಮನಸ್ಸನ್ನರಿತು, ನೋವಿಗೆ ಸ್ಪಂದಿಸಿ, ನಾಲ್ಕು ಹಿತ ಮಾತಾಡಿದರೂ ಸಾಕು ಹೊಸ ಆಶಾಭಾವ ಮೂಡಬಲ್ಲದು. ಆಶಾವಾದಿ ಮನಸ್ಸಿನಿಂದ ಏನನ್ನೂ ಸಾಧಿಸಬಲ್ಲೆವು. ಪರಿಹಾರವೂ ಸಿಗುವುದು ಕಷ್ಟವಾಗದು. ಆ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ಸಮಾಜ ತೀರಾ ಕೆಳಮಟ್ಟದಲ್ಲಿದೆ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ನನ್ನ ಆತ್ಮೀಯ ಗೆಳತಿಯೋರ್ವಳು ಡಾಕ್ಟರ್. ಅವಳು ಹೇಳಿದ ಒಂದು ಘಟನೆ ನನ್ನನ್ನು ತುಂಬಾ ಆಶ್ಚರ್ಯಚಕಿತಳನ್ನಾಗಿಸಿತು. ಹೀಗೂ ಉಂಟೆ? ಎಂದು ಒಂದು ಕ್ಷಣ ಅನಿಸಿದ್ದಂತೂ ಸುಳ್ಳಲ್ಲ.

ಘಟನೆ ಇಂತಿದೆ : ಅವಳ ಬಳಿ ದಂಪತಿ ಬಂದಿದ್ದಾರೆ. ಗಂಡ ಕೊಲ್ಲಿಯಲ್ಲಿ ಕೆಲಸಮಾಡುತ್ತಿದ್ದಾನೆ. ಹೆಂಡತಿ ಭಾರತದಲ್ಲಿರುವವಳು. ಮದುವೆಯಾಗಿ ಎರಡು ವರುಷವಾಗಿದೆ. ಮಕ್ಕಳಾಗಿಲ್ಲ. ಸಮಸ್ಯೆಗೆ ಪರಿಹಾರ ಬೇಕೆಂದು ಬಂದ್ದರು. ಆದರೆ ಅವರಿಂದ ವಿವರ ಪಡೆದ ಆಕೆಗೂ ಆಗಿದ್ದು ದೊಡ್ಡ ಆಶ್ಚರ್ಯವೇ! ಕಾರಣ ಮದುವೆಯಾದ ಆತ ಒಂದು ವಾರಕ್ಕೇ ಕೊಲ್ಲಿಗೆ ಹೋದವ ಎರಡು ವರುಷದ ನಂತರ ಈಗ ತಿಂಗಳೊಪ್ಪತ್ತಿನ ರಜೆಗೆ ಭಾರತಕ್ಕೆ ಬಂದಿದ್ದಾನೆ. ಈ ಒಂದು ತಿಂಗಳೊಳಗೇ ತನ್ನ ಪತ್ನಿ ಗರ್ಭ ಧರಿಸಲೇಬೇಕು...ಇಲ್ಲದಿದ್ದರೆ ಮತ್ತೆರಡು ವರುಷಗಳು ನಾನು ಬರುವಂತಿಲ್ಲ. ಇದಕ್ಕೇನಾದರೂ ಪರಿಹಾರವಿದೆಯೇ ಎಂದು ಕೇಳುತ್ತಿದ್ದಾನೆ ಆ ಮನುಷ್ಯ! ಆತನ ಹೆಂಡತಿ ಮಾತ್ರ ಕಣ್ತುಂಬಿಕೊಂಡು ತಲೆತಗ್ಗಿಸಿ ಕುಳಿತಿದ್ದಳಂತೆ. ನನ್ನ ಗೆಳತಿ ಹೇಳಿದ ಪರಿಹಾರ, ಆತನಿಗೆ ನೀಡಿದ ಉಪದೇಶ ಇಲ್ಲಿ ಅಷ್ಟು ಅಗತ್ಯವಿಲ್ಲ. ಆದರೆ ಕೊಲ್ಲಿಯಿಂದ ಆತ ಬರುವವರೆಗೂ ಇತರರ ಮಾತುಗಳನ್ನು, ಮನೆಯವರ ಸಂಶಯ ದೃಷ್ಟಿಯನ್ನು ಎದುರಿಸುವ ಆ ಹೆಣ್ಣಿನ ಮನಃಸ್ಥಿತಿಯನ್ನು ಮಾತ್ರ ನಾವು(ಸಮಾಜ) ನೋಡಹೋಗುವುದೇ ಇಲ್ಲ! ಇದು ನಮ್ಮಲ್ಲಿನ ಸಂತಾನವಿಹೀನತೆಗೆ ನಾನು ಕೊಡುತ್ತಿರುವ ಅತೀ ಸಣ್ಣ ಕಾರಣ ಅಷ್ಟೇ!!

ನಾನು ನನ್ನ ಕೆಲಸದ ಸಮಯದಲ್ಲಿ ತಿಳಿದುಕೊಂಡ ಹಾಗೂ ಓದಿಕೊಂಡ ಕೆಲವು ಪ್ರಮುಖ ಪರಿಹಾರ ಕ್ರಮಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡುತ್ತಿದ್ದೇನೆ.

೧. AI (Artificial insemination )

೨. IUI (Intravaginal insemination)

೩, IVF (Invitro Fertilization)

4. ICSI (Intracytoplasmic sperm Injection)
ಈ ಮೇಲಿನ ಚಿಕಿತ್ಸಾವಿಧಾನಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಈ ಕೆಳಗಿನ ವೈದ್ಯಕೀಯ ಲಿಂಕ್‍ಗಳಿಗೆ ಭೇಟಿ ನೀಡಬಹುದು.


1. http://en.wikipedia.org/wiki/Artificial_insemination
2. http://www.ehow.com/about_5057777_types-artificial-insemination-humans.html
3. http://www.ivf-infertility.com/ivf/standard/procedure/index.php
4. http://www.babycenter.in/preconception/fertilitytreatments/icsi/#2

ತಮ್ಮ ಪತ್ನಿಯನ್ನು ಆಕೆಯ ತೀವ್ರ ಪ್ರತಿರೋಧವಿದ್ದರೂ, ಬೆದರಿ, ಕಾಡಿಸಿ, ಅಂಗಲಾಚಿ, ಬೇರೆ ಗಂಡಿನ ವೀರ್ಯಾಣುವನ್ನು ಇಂಜೆಕ್ಟ್ ಮಾಡಿಸಿಯಾದರೂ ಗರ್ಭಧರಿಸುವಂತೆ ಒತ್ತಾಯಿಸಿ, ಆ ಮೂಲಕ ತಾನೂ ಸಮರ್ಥ ಗಂಡು(?) ಎಂದು ಸಮಾಜಕ್ಕೆ, ಮನೆಯವರಿಗೆ ತೋರಿಸಿಕೊಡುವ ದುರಾಲೋಚನೆಯ ಗಂಡಂದಿರೂ ಸಾಕಷ್ಟು ಇದ್ದಾರೆ. ತಾಯ್ತನದ ನಿರ್ಧಾರ ಹೆಣ್ಣಿನದು. ಈ ರೀತಿ ಬಲಾತ್ಕಾರ, ಬೆದರಿಕೆಗಳಿಂದ ಅಮಾನುಷವಾಗಿ ಹಿಂಸಿಸಿ ತನ್ನ ಪುರುಷಾರ್ಥವನ್ನು ಮೆರೆಸಲು ಯತ್ನಿಸುವುದೂ ದೊಡ್ಡ ಅತ್ಯಾಚಾರವೇ ಸರಿ. ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ? ಎನ್ನುವ ಪ್ರಶ್ನೆಯೊಂದು ನನ್ನನ್ನು ಸದಾ ಕಾಡುತ್ತಿರುತ್ತದೆ. ಒಳಗೆಲ್ಲೋ ಮನಸ್ಸು "ಹೌದು" ಎನ್ನುವ ಉತ್ತರವನ್ನೂ ಕೊಟ್ಟುಬಿಡುತ್ತದೆ!

ಇನ್ನು ಈ ಮೇಲಿನ ಚಿಕಿತ್ಸೆಗಳೆಲ್ಲ ಬಹು ದೊಡ್ಡ ಮಟ್ಟದ ಹಾಗೂ ಅತಿ ದುಬಾರಿಯಾದವುಗಳು ( AI ಹಾಗೂ IUI ಚಿಕಿತ್ಸೆಗಳನ್ನು ಬಿಟ್ಟು). ಫಲಕಾರಿಯಾಗುವ ಗ್ಯಾರಂಟಿ ಕೂಡ ೧೦೦% ಕೊಡಲಾಗದಂಥವುಗಳು. ಇವುಗಳಲ್ಲದೇ ಇನ್ನೂ ಅನೇಕ ಚಿಕ್ಕ ಪುಟ್ಟ ಚಿಕಿತ್ಸೆಗಳು ಲಭ್ಯವಿವೆ. ಅಲೋಪತಿ ಚಿಕಿತ್ಸೆಗಳಲ್ಲದೇ ಅನೇಕ ಹೋಮಿಯೋಪತಿ, ಆಯುರ್ವೇದಿಕ್, ಯುನಾನಿ ಇತ್ಯಾದಿ ಚಿಕಿತ್ಸೆಗಳೂ ಕೈಗೆಟಕುವ ದರದಲ್ಲೇ ಲಭ್ಯವಿವೆ. ಯಾವುದಕ್ಕೂ ಮಾನಸಿಕ ಶಕ್ತಿ ಹಾಗೂ ಸಂಕಲ್ಪ ಇರಬೇಕಷ್ಟೇ. ಅತಿ ನಿರಾಸೆ, ಒತ್ತಡ, ಭಾವೋದ್ವೇಗಗಳೇ ತುಂಬಿದ್ದರೆ ಯಾವ ಚಿಕಿತ್ಸೆಯೂ ಫಲಿಸದು. ನಂಬಿಕೆ ಎಲ್ಲಕ್ಕಿಂತ ಮುಖ್ಯ. ಅದೊಂದಿದ್ದರೆ ಯಾವುದೂ ಸರಳ ಸುಲಭ.


- ತೇಜಸ್ವಿನಿ ಹೆಗಡೆ.

ಭಾನುವಾರ, ಅಕ್ಟೋಬರ್ 10, 2010

ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...

ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ

ಸಾಗರನ ಸಾಕ್ಷಿಯಿಟ್ಟು, ಬೆರಳಿಗೆ ಅಲೆಗಳುಂಗುರವಿತ್ತ,
ತಿಳಿ ಬಾನ ಕೇಳಿ ಪಡೆದ ಒಂಟಿ ತಾರೆಯ ಹಣೆಗಿತ್ತ,
ಬಿದಿಗೆ ಚಂದಿರನ ಕರಗಿಸಿ ಮೂಗಿನ ಬೊಟ್ಟಿಗಿಟ್ಟ,
ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..

ಕೈಯೊಳಗೆ ಕೈ ಬೆಸೆದು ಮೂಡಿದ್ದ ಕೆಂಪು ಗೆರೆಗಳಾ ಬಳೆಗಳು,
ತೊಳೆದರೂ ತೊಡೆಯದಿದ್ದ ನಿನ್ನ ಹೆಸರಿನಾ ಮದರಂಗಿ,
ನೀನಿತ್ತ ಮುಗುಳ್ನಗೆಯ ಚಿಲುಮೆ ನೂಪುರವಾಗಿತ್ತು ಕಾಲ್ಗಳಿಗೆ,
ನೀನಿತ್ತ ಮಲ್ಲಿಗೆಯ ಕಂಪು ಬಾಡಿದ್ದರೂ ಒಳಗಿತ್ತು ಉಸಿರಾಗಿ,
ತುಂಬಿ ಬಿಡು ಮತ್ತೊಮ್ಮೆ ನನ್ನೊಳಗದೇ ಬಣ್ಣವ...

ಕಣ್ಣಂಚುಗಳಿಂದುದುರುತಿದ್ದ ಹನಿಗಳನ್ನೆಲ್ಲಾ ಪೋಣಿಸಿ,
ಮುತ್ತಿನ ಹಾರವ ಮಾಡಿ ಕೊಟ್ಟಿದ್ದೆ ನೀನೆನಗಂದು,
ಕರಗಿ ಹನಿಯುತಿವೆ, ಒಂದೊಂದಾಗುದುರುತಿವೆಯೀಗ,
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ ?!


ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ

-ತೇಜಸ್ವಿನಿ ಹೆಗಡೆ

ಬುಧವಾರ, ಅಕ್ಟೋಬರ್ 6, 2010

ಪ್ರಾರ್ಥನೆ


Courtesy - www.downtownstudentministries.org

ಇಷ್ಟು ಶಕ್ತಿಯ ಕೊಡು ಭಗವಂತ
ಮಾನಸಿಕ ಶಕ್ತಿ ದುರ್ಬಲವಾಗದಿರಲಿ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ.

ದೂರವಾಗಿಸಿ ಅಜ್ಞಾನದ ಕತ್ತಲ, ಜ್ಞಾನದ ಬೆಳಕನು ನೀಡು
ಎಲ್ಲಾ ಕೆಡುಕಿಂದ ಬದುಕಿರುವ ನಮಗೆ, ಸಿಕ್ಕಷ್ಟೇ ಸರಿ ಉತ್ತಮ ಬದುಕ ನೀಡು
ಯಾರ ಕುರಿತೂ ಯಾರಿಗೂ ದ್ವೇಷವುಂಟಾಗದಿರಲಿ, ಹಗೆಯ ಭಾವ ಮನದೊಳು ಮನೆಮಾಡದಿರಲಿ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ.

ನಮಗೇನು ದೊರಕಿದೆ ಎಂದು ನಾವು ಯೋಚಿಸದೇ, ನಾವೇನು ಅರ್ಪಿಸಿದ್ದೇವೆಂದು ಯೋಚಿಸುವ
ಎಲ್ಲರಿಗೆ ಹಂಚುತ ಸಂತಸದ ಹೂವುಗಳ, ಎಲ್ಲರ ಜೀವನ ಮಧುವನವಾಗುಸುವ
ನಿನ್ನ ಕರುಣಾರಸವನು ನೀ ಹರಿಸಿ, ಪಾವನಗೊಳಿಸು ಮನದ ಪ್ರತಿ ಕೋಣೆಯ
ಒಳ್ಳೆಯ ದಾರಿಯಲ್ಲಿ ಸಾಗುತಿಹ ನಮ್ಮಿಂದ
ತಪ್ಪಿಯೂ ಯಾವ ತಪ್ಪೂ ಉಂಟಾಗದಿರಲಿ
ಇಷ್ಟು ಶಕ್ತಿಯ ಕೊಡು ಭಗವಂತ
ಮಾನಸಿಕ ಶಕ್ತಿ ದುರ್ಬಲವಾಗದಿರಲಿ
 

[ಇದು ನಾನು ಸದಾ ಗುನುಗುವ ನನ್ನ ಬಹು ಮೆಚ್ಚಿನ ಹಾಡುಗಳಲ್ಲೊಂದು. ಹಿಂದಿ ಚಲನಚಿತ್ರದ ಜನಪ್ರಿಯ ಹಾಡೊಂದರ ಕನ್ನಡಾನುವಾದವಿದು. ನನ್ನ ಮೊದಲ ಪ್ರಯತ್ನ. ತಪ್ಪಿರಬಹುದು. ಇದ್ದಲ್ಲಿ ತಿದ್ದಬೇಕಾಗಿ ವಿನಂತಿ. ಹಾಗೇ ಇದು ಯಾವ ಚಿತ್ರದ ಯಾವ ಹಾಡೆನ್ನುವುದನ್ನು ನೀವೇ ಕಂಡುಹಿಡಿದುಕೊಳ್ಳಬೇಕು :) ಈ ಹಿಂದಿ ಹಾಡು ಬೇಕಿದ್ದಲ್ಲಿ (mp3 format) ತಿಳಿಸಿ. ಲಿಂಕ್ ಮೈಲ್ ಮಾಡುವೆ..]

-ತೇಜಸ್ವಿನಿ.

ಮಂಗಳವಾರ, ಅಕ್ಟೋಬರ್ 5, 2010

ಬುದ್ಧಿ-ಹೀನ ಜೀವಿಗಳು?

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" - ಶಂಕರಾಚಾರ್ಯರ ದೇವ್ಯಾಪರಾಧ ಕ್ಷಮಾಪಣ ಶ್ಲೋಕದ ಈ ಸಾಲನ್ನು ಪ್ರತಿ ಬಾರಿ ಹೇಳುವಾಗಲೂ ಕಣ್ತುಂಬಿಕೊಳ್ಳುತ್ತದೆ. ಹೆತ್ತ ಮಕ್ಕಳು ಕುಖ್ಯಾತರಾಗಬಹುದು. ಆದರೆ ಆ ಕುಖ್ಯಾತ ಮಕ್ಕಳನ್ನೂ ಅವರನ್ನು ಹೆತ್ತ ತಾಯಿ ಪ್ರೀತಿಸುತ್ತಾಳೆ. ಅವರ ಬದುಕಿಗಾಗಿ ಪ್ರಾರ್ಥಿಸುತ್ತಾಳೆ(ಇದಕ್ಕೆ ಅಪವಾದವೆಂಬಂತೆ ಈ ಕಲಿಯುಗದಲ್ಲಿ ಕೆಲವು ತಾಯಂದಿರೂ ಇದ್ದಾರೆ...ಮಕ್ಕಳನ್ನು ಶೋಷಿಸುವವರು. ಆದರೆ ಕೆಟ್ಟ ಮಕ್ಕಳಷ್ಟು ಕೆಟ್ಟ ತಾಯಂದಿರು ತೀರಾ ಕಡಿಮೆಯೇ.)

ಮಕ್ಕಳು ಎಷ್ಟೇ ಮಾನಸಿಕ/ದೈಹಿಕ ಹಿಂಸೆಯನ್ನಿತ್ತರೂ ಕೂಡ ಆಕೆಯೆಂದೂ ಹೆತ್ತ ಮಗುವಿಗೆ ಕೇಡನ್ನು ಬಯಸಳು. ವೇಶ್ಯೇಯೇ ಆಗಿರಲಿ.. ಆಕೆ ತನ್ನ ಮೈ ಮಾರಿಕೊಂಡಾದರೂ ಸರಿಯೇ ತನ್ನ ಮಗುವಿಗೆ ಉನ್ನತ ಭವಿಷ್ಯ ಕೊಡಲು ಯತ್ನಿಸುವಳು. ತನಗೆ ಜೀವವನ್ನಿತ್ತ, ಬದುಕನ್ನಿತ್ತ, ಹಾಲುಣಿಸಿ ಸಲಹಿದ ತಾಯಿಗೆ ಅತೀವ ಪ್ರೀತ್ಯಾದರ ತೋರುವುದು ಬೇಡ, ಕನಿಷ್ಠ ಗೌರವವನ್ನಾದರೂ ಕೊಟ್ಟರೆ ಆತ ಹುಟ್ಟಿದ್ದಕ್ಕೂ ಒಂದು ಅರ್ಥ ಬರುವುದು. ಆದರೆ ಕೆಲವರು, ಬುದ್ಧಿಜೀವಿಗಳಲ್ಲೇ ಅತೀ ದೊಡ್ಡ ಬುದ್ಧಿಜೀವಿಗಳೆನ್ನಿಸಿಕೊಳ್ಳುವ ತೆವಲಿಗೆ ಬಿದ್ದು, ತಮ್ಮ ಅಪೂರ್ವ(???) ಬರಹಕ್ಕೆ ಆತ್ಮ ಚರಿತ್ರೆ ಎಂಬ ಸುಂದರ ಶೀರ್ಷಿಕೆಯನ್ನು ಕೊಟ್ಟು ಅದರಲ್ಲಿ ತನ್ನ ಕೆಟ್ಟ ಅವಗುಣಗಳಿಗೆಲ್ಲಾ ಮನೆಯವರ/ಪರಿಸರದ ಕಾರಣಗಳನ್ನು ಕೊಡುತ್ತಾ, ಹೆತ್ತ ತಾಯಿಯನ್ನೂ ನಿಕೃಷ್ಟವಾಗಿ ಚಿತ್ರಿಸಿ ತಾನೆಷ್ಟು ನಿಷ್ಪಕ್ಷಪಾತಿ ಎಂದು ಸಾರುತ್ತಾ ಆ ಮಾನಸಿಕ ಅಸ್ವಸ್ಥತೆಯಲ್ಲೇ ಮುಳುಗೇಳುತ್ತಿರುತ್ತಾರೆ. ಇಂತಹದೇ ಒಂದು ಕೀಳುಮಟ್ಟದ ಬರಹ (ಹೆಸರಿಗೆ ಆತ್ಮ ಚರಿತ್ರೆ) ಪ್ರಜಾವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಾಣಿಯಲ್ಲಿ ಧಾರಾವಾಹಿಯಂತೆ ಕಳೆದ ಆದಿತ್ಯವಾರದಿಂದ(೩.೧೦.೨೦೧೦)ಬರುತ್ತಿದೆ. ಈ ಘನ(!!!?) ಲೇಖನವನ್ನು ಬರೆದವರು ಮಹಾನ್ ಬುದ್ಧಿಜೀವಿಯಾದ ಗಿರೀಶ್ ಕಾರ್ನಾಡರು. ಅದರ ಲಿಂಕ್ ಈ ಕಳಗಿದೆ. ನೀವೂ ಓದಿ. ನನ್ನ ಅಭಿಪ್ರಾಯ ತಪ್ಪೆಂದು ಎಣಿಸಿದರೆ ನೇರವಾಗಿ ಕಮೆಂಟಿಸಿ.




ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿಸುವುದು ತಪ್ಪೆಂದು ಹೇಳುತ್ತಿಲ್ಲ. ಆದರೆ ಜನ್ಮವಿತ್ತ ತಾಯಿಯ ವೈಯಕ್ತಿಕ ಬದುಕನ್ನು, ಆಕೆಯ ನೈತಿಕತೆಯನ್ನೇ ಸಾರ್ವಜನಿಕವಾಗಿ ಪ್ರಶ್ನಿಸುವ, ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿ ವಿಜೃಂಭಿಸುವ ಈ ಪರಿ ನನ್ನನ್ನು ಬಹು ದಿಗ್ಭ್ರಾಂತಳನ್ನಾಗಿಸಿತು. ಜೊತೆಗೆ ಆ ಎಳೆಯ ಪ್ರಾಯದ ತಾಯಿಯ ಫೋಟೋ ನೋಡಿ ಮನದುಂಬಿಯೂ ಬಂತು. ಮಾನಸಿಕ ಅಸ್ವಸ್ಥೆಯ ಪರಾಕಷ್ಠೆಯಿದು ಎಂದರೂ ತಪ್ಪಾಗದು. ಇಂತಹ ಲೇಖಕರಿಗೆಲ್ಲಾ ಜ್ಞಾನಪೀಠ ಕೊಡುವ ನಮ್ಮ ಘನ ಸರಕಾರದ ಅಸ್ವಸ್ಥತೆಯೂ ಮುಚ್ಚಿಲ್ಲ ಅನ್ನುವುದೂ ಬೇರೆ ಮಾತು. ಈ ಕಳಪೆ ಲೇಖನಕ್ಕೆ ಗೌರವಕೊಟ್ಟು, ಕನ್ನಡದ ಹೆಮ್ಮೆಯ ಬರಹಗಾರ ಎಂದೆಲ್ಲಾ ಹೊಗಳಿ, ಮುಖಪುಟದಿಂದಲೇ ಪ್ರಕಟಿಸಿದ ಪತ್ರಿಕೆಯ ಬಗ್ಗೆಯೂ ತೀವ್ರ ಅಸಮಾಧಾನವಿದೆ.

ಬುದ್ಧಿಜೀವಿಗಳೆಲ್ಲಾ ಸೇರಿ ಭೈರಪ್ಪನವರ ಕವಲು ಕಾದಂಬರಿಯನ್ನು ಟೀಕಿಸಿದ್ದರು. ಸ್ತ್ರೀಯರನ್ನು ಗೌರವಿಸಿಲ್ಲ ಎಂದು ಕೂಗಾಡಿದ್ದರು. (ಇದರರ್ಥ ನಾನು ಕವಲನ್ನು ಸಂಪೂರ್ಣವಾಗಿ ಸಮರ್ಥಿಸುವವಳೆಂದಲ್ಲ). ಆದರೆ ಅಲ್ಲಿ ಭೈರಪ್ಪನವರ ಕವಲಿನಲ್ಲಿ ಚಿತ್ರಿತರಾಗಿರುವ ಸ್ತ್ರೀಯರು ಕಾಲ್ಪನಿಕ ಪಾತ್ರಗಳು. ವಾಸ್ತವಿಕ ಕಲ್ಪನೆಯನ್ನು ಕಟ್ಟಿಕೊಡುವಂತಹವು ಮಾತ್ರ. ಆದರೆ ಇಲ್ಲಿ ಈ ಲೇಖಕರು ತಮ್ಮ ತಾಯಿಗೆ ಕೊಟ್ಟಿರುವ ಅಗೌರವ, ಅನಾದರ, ಅನೈತಿಕತೆಯ ಪಟ್ಟ- ಎಲ್ಲವನ್ನೂ ಕಂಡಾಗ ತುಂಬಾ ನೋವು, ಅಸಹನೆ, ಕೋಪ, ತಿರಸ್ಕಾರ ಮೂಡುವುದಂತೂ ಸತ್ಯ. ಇದು ನನ್ನ ವೈಯಕ್ತಿಕ ಭಾವನೆ ಅಷ್ಟೇ. ಆದರೆ ಕೂಲಂಕುಶವಾಗಿ ಓದಿದರೆ ನಿಮಗೂ ಹಾಗನ್ನಿಸದಿರದು.

ಬುದ್ಧಿಜೀವಿಗಳೆಂದರೆ ಬುದ್ಧಿಯಿಂದಲೇ ಜೀವಿಸಲು ಹೆಣಗಾಡುವ ನಿರುಪದ್ರವಿಗಳೆಂದುಕೊಂಡಿದ್ದೆ. ಈಗ ಭಯವಾಗುತ್ತಿದೆ! ಕಾರ್ನಾಡರ ಈ ಲೇಖನಕ್ಕೆ ನನ್ನ ಧಿಕ್ಕಾರವಿದೆ! ಸಮಾಜದಲ್ಲಿ ಗಣ್ಯರೆನಿಸಿಕೊಂಡು ಪೋಸುಕೊಡುವ ಇಂತಹವರ ಮಾನಸಿಕ ಅಸ್ವಸ್ಥೆಯಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುವುದರ ಬಗ್ಗೆ ಕಳಕಳಿಯಿದೆ. ಹ್ಮ್ಂ.... ಆರು ತಿಂಗಳಲ್ಲಿ ಮೂರು ದಿನಪತ್ರಿಕೆಯನ್ನು ಬದಲಿಸಿರುವೆ. ಈಗ ಮತ್ತೆ ಆ ಸಂದರ್ಭ ಒದಗಿಬಂದಿದೆ! ಆರು ಹಿತವರು ನಿನಗೆ ಈ ಮೂವರೊಳಗೆ ಎಂದು ಯೋಚಿಸುತ್ತಿರುವೆ.

-ತೇಜಸ್ವಿನಿ ಹೆಗಡೆ.