ಶುಕ್ರವಾರ, ಅಕ್ಟೋಬರ್ 7, 2011

ಚಂದಿರನೇತಕೆ ಓಡುವನಮ್ಮಾ...

http://www.desktopnexus.com/tag/seaside/
ದೆಷ್ಟು ಹೊತ್ತಾಗಿತ್ತೋ ಆಕೆ ಹಾಗೆ ತದೇಕ ಚಿತ್ತದಿಂದ ನೀಲಾಗಸವನ್ನೇ ದಿಟ್ಟಿಸುತ್ತಾ ಕುಳಿತು. ಎತ್ತಿದ್ದ ತಲೆಯ ಭಾರವನ್ನು ಹೊತ್ತು, ಕುತ್ತಿಗೆಯೂ ಸೋತು ಬಂದು, ಆ ನೋವಲ್ಲೇ ಹಿತಕಾಣುವಷ್ಟು ಹೊತ್ತು ನೋಡುತ್ತಲೇ ಇದ್ದಳು. ಅಲ್ಲಲ್ಲಿ ಚೆಲ್ಲಿರುವ ತಾರೆಗಳಿಂದ ಆಗೊಮ್ಮೆ ಈಗೊಮ್ಮೆ ಮಿನುಗುತ್ತಿರುವ ಆಗಸದೊಳಗೇ ನೆಟ್ಟ ನೋಟವಿಟ್ಟವಳ ಕಣ್ಗೋಲಿಗಳು ಒಳಗೊಳಗೇ ಹುಡುಕುತ್ತಿದ್ದುದು ಆ ಚಂದಿರನನ್ನೇ. ಮೋಡದ ಮರೆಯೊಳಗೆ, ತೆಂಗಿನ ಗರಿ ನಡುವೆ, ಹಬ್ಬಿರುವ ಚಪ್ಪರ ಬಳ್ಳಿಯ ಕಿರು ಸಂದಿ ಗೊಂದಿಗಳೊಳಗೆಲ್ಲಾ ಹುಡುಕಿ ಸುಸ್ತಾಗಿ ಕೊನೆಗೆ ಮಿನುಗು ತಾರೆಗಳನ್ನಷ್ಟೇ ತುಂಬಿಕೊಳ್ಳುತ್ತಿದ್ದಳು. ಕಾಲು ಚಾಚಿ ಕೈಗಳನ್ನು ಊರಿ ಕುಳಿತಿದ್ದರೂ, ಅಡಿಯಿದ್ದ ಮರಳು ತನ್ನ ಎಳೆದೆಳೆದು ಒಳಗೆಳೆಯುವಂತಹ ಭಾಸ... ನಿಮಿಷಕೊಂದು ನಿಟ್ಟುಸಿರು.... ಎದೆಯೊಳಗೆಲ್ಲಾ ಭಾವದಲೆಗಳ ಭೋರ್ಗರೆತ. ಕ್ಷಣ ಕ್ಷಣಕ್ಕೂ ಶಶಿಯಿಲ್ಲದ ಸುವಿಶಾಲ ಬಾನು ತನಗೆ ಆಪ್ತವಾಗುತ್ತಿರುವಂತೆ ಅವಳಿಗನಿಸತೊಡಗಿದ್ದು ಅವನಿಲ್ಲದ ತನ್ನ ಈ ಬದುಕಿನಿಂದಲೋ ಎಂತೋ ಎಂದೆನಿಸಿ ಕಣ್ಮುಚ್ಚಿದವಳ ರೆಪ್ಪೆಯ ಮೇಲೆ ಬಿದ್ದವು ಎರಡು ದಪ್ಪ ಹನಿಗಳು.

ಹೊರಗೆ ತೊಯ್ದು ತೊಪ್ಪೆಯಾದರೂ ಒಳಗೆಲ್ಲಾ ಉರಿಯ ತಾಪ... ಸುಡುವ ಸೂರ್ಯನನೇ ಹಿಡಿದು ಒಡಲೊಳಗೆ ನೂಕಿದಂತಹ ಅನುಭವ. ಚಂದ್ರಮನಿಲ್ಲದ ನೀಲಾಗಸದ ಖಾಲಿತನವನ್ನೇ ಹೋಲುತ್ತಿರುವ ಬರಡು ಬದುಕು. ಬೋಳು ಹಣೆಗೆ ಕೆಂಪಿಟ್ಟರೇನು? ಕಪ್ಪಿಟ್ಟರೇನು? ಇಟ್ಟ ಮಾತ್ರಕೆ ಬೆಳಗುವುದೇ ಸಿಂದೂರ ಅವನ ಸ್ಪರ್ಶವಿಲ್ಲದೇ!!? ನೀಲಾಗಸಕಾದರೂ ಹದಿನೈದು ದಿನಕ್ಕೊಮ್ಮೆ ಮತ್ತೊಂದು ಸದವಕಾಶವಿದೆ. ಆದರೆ ತನ್ನ ಬಾಳ ಚಂದಿರ ಆ ಆಗಸವನ್ನೂ ದಾಟಿ ಇನ್ನೆಲ್ಲೋ ಅವಿತಿರುವಾಗ ಯಾವ ಹುಣ್ಣಿಮೆ ಯಾವ ಅಮವಾಸ್ಯೆ?? ಗರ್ಭದೊಳಗೆ ಮಿಸುಕಾಡುವ ಜೀವದ ಚಲನೆ ಆಗೀಗ ನೆನಪಿಸುತ್ತಿರುತ್ತದೆ.... ಬದುಕು ನಿನ್ನದೊಂದೇ ಹಕ್ಕಲ್ಲಾ ಎಂದು ಸದಾ ಎಚ್ಚರಿಸುತ್ತಿರುತ್ತದೆ.

ಒಮ್ಮೊಮ್ಮೆ ಅವಳಿಗನ್ನಿಸಿದ್ದಿದೆ... ಶಪಿಸಿಬಿಡಬೇಕು ಆ ಚಂದಿರನ, ನನ್ನವನ ನೆನಪ ಕೊರೆಕೊರೆದು ತನ್ನ ಶೀತಲ ಕಿರಣಗಳಿಂದ ಘಾಸಿಗೊಳಿಸುವ ಹಾಳು ಶಶಿಯ ಸುಟ್ಟು ಬಿಡಬೇಕು ಆ ರವಿಯ ಛೂ ಬಿಟ್ಟು. ಮರುಕ್ಷಣ ಮರುಕವುಕ್ಕುವುದು ನೀಲಾಗಸದ ಮೇಲೆ... ಕೈ ಅಪ್ರಯತ್ನವಾಗಿ ಹುಬ್ಬುಗಳ ಮಧ್ಯೆ ನಿಂತು ನಡು ಬೆರಳಿಂದ ಹಾಗೇ ಸವರುವುದು ಎಂದೂ ಮಾಗದ ಗಾಯವೊಂದನು.

"ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ ..." ಒಳಮನೆಯ ಮೂಲೆಯಲ್ಲಿ ಮಗ್ಗುಲಾಗಿದ್ದ ಅಜ್ಜಮ್ಮನ ಒಡಲೊಳಗಿಂದ ಎದ್ದು ಬರುತ್ತಿದ್ದ ಹಾಡು ಮತ್ತಷ್ಟು ಇವಳ ಉರಿಗೆ ತುಪ್ಪಹಾಕುತ್ತಿದೆ. ಆಗೊಮ್ಮೆ ಈಗೊಮ್ಮೆ ಗಂಟಲು ಅಮುಕಿದಂತಾಗಿ ಅಲ್ಲಲ್ಲಿ ತುಂಡರಿಸುವ ದನಿ ಮತ್ತೆ ಮತ್ತೆ ಮೆಲ್ಲನೆದ್ದು ತಾರಕಕ್ಕೇರಿ ಅಪ್ಪಳಿಸುವ ಅಲೆಯಂತೆ ಎದೆಯ ತಟ್ಟಿ ಭೋರ್ಗರೆಯುತಿದೆ. ಅವಳ ಮನಸು ಸಾವಿರಸಲ ಅದನೇ ಗುನುಗುನಿಸುತ್ತಿದೆ... ಬೆರಳುಗಳು ಮರಳೊಳಗೆ ಅಂತಕನ ದೂತರಿಗೆ ಓಲೆಯೊಂದನು ಗೀಚುತ್ತಲೇ ಇವೆ. ನಿರ್ದಯಿ ಅಲೆಗಳು ಉರುಳುರುಳಿ ಬಂದು ಅಳಿಸುತ್ತಲೇ ಇವೆ....

----

ಓಡುವ ಚಂದಿರನ ನೋಡು ನೋಡುತಲೇ, ತೆರೆಗಳು ಹೊತ್ತು ತರುವ ಮರಳುಗಳ ಮೇಲೆ ಗೀಚುತ್ತಲೇ... ವರುಷ ನಾಲ್ಕು ಕಳೆದುಹೋದವು. ದೃಶ್ಯ ಒಂದೇ, ಆದರೆ ನೋಟ ಬೇರೆ! ಪುಟ್ಟನಿಗೆ ಚಂದ್ರಮ ವಿಶಿಷ್ಟನಾಗಿ ಕಂಡರೆ, ಆಕೆಗೆ ಸದಾ ಒಳ ಬೇಗುದಿಯ ಕೆದಕಿ ಕೆಣಕಿಯಾಡುವ ಕಟುಕ. ಒಳಮನೆಯಜ್ಜಿಯ ಯಾತನೆಯ ಕಂಡು ಅಂತಕನ ದೂತರಿಗೂ ಎಲ್ಲೋ ಸಣ್ಣ ಕರುಣೆ ಬಂದಿರಬೇಕು... ಅವಳನ್ನೂ ಜೊತೆಗೊಯ್ದಿದ್ದರು ವರುಷದ ಹಿಂದೆಯೇ! ತೆರೆಗಳು ಮಾತ್ರ ತನ್ಮಯತೆಯಿಂದ ಅವಳು ಅವನ ಹೆಸರು ಬರೆದಷ್ಟೂ ಬೇಸರಿಸದೇ, ತುಸು ನಿಮಿಷವೂ ಕಾಯದೇ, ಹಾಗೇ ಅಳಿಸುತ್ತಲೇ ಇದ್ದವು ಅವನ ಹೆಸರನ್ನೂ ಅವಳನ್ನೂ....

"ಹೃದಯ ಬಯಸುವುದು ಸಿಗದ ಬಯಕೆಗಳನ್ನೇ... ಅದುಮಿದಷ್ಟೂ ಒತ್ತಡದ ಪ್ರಕ್ರಿಯೆ ಹೆಚ್ಚು....ಬಿಟ್ಟು ಬಿಡು ಒಮ್ಮೆ.. ಹಾರಿದಷ್ಟು ಹಾರಲಿ... ಉಳಿದಷ್ಟು ಉಳಿಯಲಿ... ಮಿಕ್ಕಿದ ಜಾಗದಲ್ಲಿ ತುಂಬು ಹೊಸ ಆಸೆ, ಕನಸುಗಳನ್ನ.." ಎಂದು ಸ್ವಾಂತನ ನೀಡಿದ್ದ ಗೆಳತಿಗೇನು ಗೊತ್ತು.... ನನ್ನೊಳಗಿನ ಕುದಿವ ಲಾವಾ ಉಕ್ಕಿದಷ್ಟೂ ಅಕ್ಷಯವಾದದ್ದೆಂದು! ನಿಟ್ಟುಸಿರ ರಭಸವೂ ಯಾರಿಗೂ ಕೇಳದು ಉಬ್ಬರಗಳ ಅಬ್ಬರಗಳ ಭರದಲ್ಲಿ! ಓಡುವ ಚಂದ್ರಮನ ಹಿಡಿದೊಮ್ಮೆ ನಿಲ್ಲಿಸಿ, ನೀಲಾಗಸದಿಂದ ಕಿತ್ತು ತನ್ನ ಭ್ರೂಮಧ್ಯೆ ನಿಲ್ಲಿಸಬೇಕೆಂಬ ಹುಚ್ಚು ಕಲ್ಪನೆಗಳಿಗೇನೂ ಕೊನೆಯಿರಲಿಲ್ಲ. ಆದರೇನಂತೇ.... ತಕ್ಷಣ ನೆನಪಿಗೆ ಬರುವುದು, ಶಶಿಯ ನೋಡಿ ಸಂಭ್ರಮಿಸುವ ತನ್ನ ಕುಡಿಯ ಮೊಗ. ಕಣ್ಣಂಚಿನ ಬಿಂದುವಿಗೆ ತಡೆಯಾಗುವ ಕೈ ನಸುನಗುತ್ತಾ ಮಗುವ ಕೈ ಹಿಡಿದು ಹಿಂತಿರುಗುವಳು. ಮತ್ತೆ ಮರುದಿನದ ಸಂಜೆಯ ನಿರೀಕ್ಷೆಯಲ್ಲಿ... ಅತ್ತ-ಇತ್ತ, ಸುತ್ತ-ಮುತ್ತಲೆಲ್ಲಾದರೂ ಚಂದ್ರಮನ ಚೂರೇನಾದರೂ ಸಿಗಬಹುದೇನೋ ಎಂಬ ಹೊಸ ಹುಡುಕಾಟದಲ್ಲಿ....

---

ಚಂದ್ರನ ಚೂರನ್ನು ಅರಸಿ ಹೋದಂತೆಲ್ಲಾ ಸಿಕ್ಕಿದ್ದು ಬೆಳಚು ಕಲ್ಲೇ ಆಗಿದ್ದು ಅವಳ ದುರದೃಷ್ಟವೋ ಇಲ್ಲಾ ಕಲ್ಲುಗಳು ಚುಚ್ಚುವ ಮೊದಲೇ ಅವಳು ಎಚ್ಚೆತ್ತುಕೊಂಡಿದ್ದು ಅದೃಷ್ಟವೂ.... ಆದರೆ ವರುಷಗಳು ಮತ್ತೆ ನಾಲ್ಕು ಕಳೆದಿದ್ದವು. ಮಗನ ಆಟ ಪಾಠಗಳ ನಡುವೆ ಹಳೆನೆನಪುಗಳ ಹರಿತಗೊಳಿಸಲು ಸಮಯ ಸಾಲುತ್ತಿರಲಿಲ್ಲ..... ನೋವಿನ ತೀವ್ರತೆ ಸ್ಥಿತ್ಯಂತರಗೊಂಡಿತ್ತು ಅಲ್ಲೇ ಹೆಪ್ಪುಗಟ್ಟಿ. ಒಂದು ಸುದಿನ ಬೆಳಚುಕಲ್ಲೆಂದೇ ಬಗೆರು ಎಸೆಯ ಹೊರಟಿದ್ದ ಚಂದ್ರಮನ ಚೂರೊಂದು ಅವಳ ಬದುಕನ್ನು ಬೆಳಗಲು, ಒಳಗೆಲ್ಲೋ ತಿಂಗಳ ಬೆಳಕಿನ ಶೀತಲತೆ! 

ಆಗಸದ ಮೇಲಿರುವವನ ನೆನೆಯುತ್ತಾ, ಹಣೆಗೆ ಬೆಳಕಾದವನ ಜೊತೆಗೂಡಿ, ಮತ್ತದೇ ಸಾಗರಿಯ ಬಳಿ ಬಂದಾಗ ಕೈಗಳು ಮಾತ್ರ ಏನನ್ನೂ ಬರೆಯಲೊಲ್ಲವು. ಆದರೆ ಮಗರಾಯ ಮಾತ್ರ ಎಡೆ ಬಿಡದೇ ಬರೆಯುತಿರುವ ಹೊಸ ಶಾಲೆಯಲ್ಲಿ ಕಲಿತ ಹೊಸ ಹಾಡಿನ ಸೊಲ್ಲುಗಳನ್ನು. ತೆರೆಗಳ ತೆಕ್ಕೆಗಳು ಅಳಿಸಲಾಗಷ್ಟು ದೂರದಲ್ಲಿ ಕುಳಿತು ಏಕಾಗ್ರತೆಯಿಂದ ಬರೆಯುತ್ತಲೇ ಇದ್ದವನ ಬಳಿ ಬಂದು ಇಣುಕಿ ಓದುತ್ತಿರುವಂತೇ ಕಣ್ಣ ಹನಿಗಳ ಜೊತೆ ಮುಗುಳ್ನಗುವೂ ಹೊರಬಿತ್ತು.

ಚಂದಿರನೇತಕೆ ಓಡುವನಮ್ಮಾ
ಮೋಡಕೆ ಬೆದರಿಹನೆ? 
ಬೆಳ್ಳಿಯ ಮೋಡದ ಅಲೆಗಳ ಕಂಡು 
ಚಂದಿರ ಬೆದರಿಹನೆ? - ಎಂದು ಸೊಟ್ಟ ಅಕ್ಷರಗಳಲ್ಲಿ ಓರೆಕೋರೆ ಗೀಚಿದ ಮಗನ ತಲೆಯನ್ನು ಪ್ರೀತಿಯಿಂದ ಎದೆಗೊತ್ತಿಕೊಂಡಳು ಆಕೆ. "ಪುಟ್ಟಾ, ಚಂದಿರ ಸ್ಥಿರ.... ಮೋಡಗಳೇ ಚಂಚಲ. ಚಲಿಸುವ ಅವುಗಳು ನೀರುಗಳ ಚಾದರಹೊದ್ದು, ಅವನ ಬೆಳಕನ್ನಷ್ಟೇ ಮುಚ್ಚಿಹಾಕಬಲ್ಲವು.. ಆದರೆ ಅವನೊಳಗಿನ ಬೆಳಗೋ ಗುಣವನ್ನು ತಡೆಯಲಾರವು....ಒಂದೆಲ್ಲಾ ಒಂದು ದಿನ ಸುರಿದು ಹರಿದು ಹೋಗಲೇ ಬೇಕಿರುವ ಮೋಡಗಳಿಗೆ ಬೆದರಿಕೆ ಏಕೆ? ನಿನ್ನ ಚಂದಿರ ಅನುರೂಪನೇ ಸರಿ....ಅವನು ಮೇಲಿಂದ ನಮ್ಮ ನಗುವ ನೋಡಿ ನಗುತಿರಲಿ.... ನಮಗಿಬ್ಬರಿಗೆ ಅವನ ತಿಂಗಳಷ್ಟೇ ಸಾಕು ಈ ಬದುಕ ಜೀವಿಸಲು...." ಎಂದು ನಕ್ಕವಳನ್ನೇ ನೋಡಿ ತಾನೂ ನಕ್ಕ ಪುಟ್ಟ. ಅಮ್ಮನ ಮಾತುಗಳೊಂದೂ ಅರ್ಥವಾಗದಿದ್ದರೂ ಅವಳೊಳಗಿನ ಆ ಅಪರೂಪದ ಸಂಭ್ರಮದ ಅನುಭೂತಿ, ಅವನೊಳಗೂ ಸಂತಸವ ತುಂಬಿತ್ತು. ಅವಳ ಮನ ಹಾಡಿನ ಕೊನೆಯ ಸಾಲನ್ನು ಮತ್ತೆ ಮತ್ತೆ ಹಾಡುತ್ತಿತ್ತು...
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

-ತೇಜಸ್ವಿನಿ ಹೆಗಡೆ.


7 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಅದ್ಭುತ ಪ್ರಕೃತಿ ಪ್ರತಿಮೆಗಳೋಡನೆ- ಒಂಟಿತನ, ವಿರಹ, ನೀರೀಕ್ಷೆ, ಬೆರುಗು, ಎಲ್ಲವುಗಳಿಗೆ ಸಾಂಕೇತಿಕವನ್ನಾಗಿಸಿ ಹೊಸೆದ ಕಥೆ, ಪಾತ್ರಗಳಿದ್ದೂ ಇಲ್ಲದಂತೆಯೇ, ಚೌಕಟ್ಟಿಗೆ ಸೀಮಿತವಾಗದೆ, ತನ್ನ ಹರುಹನ್ನು ಓದುಗನ ಮನ ಹರಿದಷ್ಟ್ತೆತ್ತರ ವಿಸ್ತಾರಕ್ಕೆ ತಿರುಗಿಸುವ ಅದ್ಭುತ ಕಥೆ

sunaath ಹೇಳಿದರು...

ಸೀತಾರಾಮರು ನಿಮ್ಮ ಕತೆಯ ಬಗೆಗೆ ಸರಿಯಾದ ಅಭಿಪ್ರಾಯ ಹೇಳಿದ್ದಾರೆ. ನನ್ನದೂ ಅದೇ ಅಭಿಪ್ರಾಯ!

shivu.k ಹೇಳಿದರು...

ವಾಹ್! ಇವತ್ತು ಬೆಳಿಗ್ಗೆ ಒಂದು ಅದ್ಬುತ ಕತೆಯನ್ನು ಓದುವುದರೊಂದಿಗೆ ಪ್ರಾರಂಭ. ಈ ಕತೆಯನ್ನು ವರ್ಣಿಸಲು ನನ್ನಲ್ಲಿ ಮಾತುಗಳಿಲ್ಲ...ತೇಜಸ್ವಿನಿ ಮೇಡಮ್..ಅಭಿನಂದನೆಗಳು.

ಸುಷ್ಮಾ ಮೂಡುಬಿದಿರೆ ಹೇಳಿದರು...

I liked...chennagide..

Shruthi B S ಹೇಳಿದರು...

adbhutavaagide...nanage tumba ishtavaayitu. baduku yavaaga entaha badalaavane taruvudo tiliyadu.... baduku bandante sweekarisabeku. kanneerallu ondu ritiya hitavide.....:)

ವಾಣಿಶ್ರೀ ಭಟ್ ಹೇಳಿದರು...

ಹೃದಯ ಬಯಸುವುದು ಸಿಗದ ಬಯಕೆಗಳನ್ನೇ... ಅದುಮಿದಷ್ಟೂ ಒತ್ತಡದ ಪ್ರಕ್ರಿಯೆ ಹೆಚ್ಚು....ಬಿಟ್ಟು ಬಿಡು ಒಮ್ಮೆ.. ಹಾರಿದಷ್ಟು ಹಾರಲಿ... ಉಳಿದಷ್ಟು ಉಳಿಯಲಿ... ಮಿಕ್ಕಿದ ಜಾಗದಲ್ಲಿ ತುಂಬು ಹೊಸ ಆಸೆ, ಕನಸುಗಳನ್ನ......

Sooper tejakka... mattomme helti.. kathe bareyale ninge neene saati :)

ಪ್ರೇಮತಾಣ ಹೇಳಿದರು...

ತುಂಬಾ ಚಂದದ ಬರಹ. ಬದುಕಿನ ಹಲವು ಆಯಾಮಗಳನ್ನು ಹಲವು ಪ್ರತೀಕ ಪ್ರತಿಮೆಗಳ ಮೂಲಕ ಹೇಳಿದ ಪರಿ ಆಕರ್ಷಕ. ಇಷ್ಟೋಂದು ಚಂದದ ಬ್ಲಾಗ್ ಇಷ್ಟೋಂದು ದಿನಗಳವರೆಗೆ ನನ್ನಿಂದ ಮರೆಯಾಗಿತ್ತಾದರೂ ಹೇಗೆ ಎಂದು ಅಚ್ಚರಿಯಾಗುತ್ತಿದೆ. ಇರಲಿ, better late than never!