ಶುಕ್ರವಾರ, ನವೆಂಬರ್ 2, 2012

ನಿರಂತರ

ಎದೆಯೊಳಗೆ ನೆನಪುಗಳ ಘನ ಮೋಡಗಳ ಢೀಗೆ
ಆಗಾಗೀಗ ಕೋರೈಸುವ ಯಾತನೆಗಳ ಛಳಕು
ಕೇಳಲಾರರು ಯಾರೂ ಎದೆಯಲ್ಲಾಡಿಸುತಿಹ
ಸಿಡಿಲಿನಾ ಸದ್ದು....

ತುಂಬಿಹ ಕಣ್ಗಳೊಳಗೆ ಬಡಿದಾಡುವ-
ರೆಪ್ಪೆಗಳೇಳಿಸೋ ತರಂಗಗಳು....
ಹನಿಯುತಿವೆ ಹನಿ ಬಿಂದುಗಳ ಸದ್ದಿಲ್ಲದೇ,
ತೋಯುವ ಕೆನ್ನೆಗಳಿಗೆ ತಡೆಯೊಡ್ಡಿ ಚಿಮ್ಮಲು
ಒಲುಮೆಯ ಸ್ಪರ್ಶವಿರದೇ, ನೋಯುತಿದೆ ಮನಸು.

ರವಿಯ ಸ್ಪರ್ಶವಿಲ್ಲದೇ, ಹರಿವ ನೀರು ಕಟ್ಟಿ,
ಹಸಿರು, ಹೂವ ಹೊತ್ತು ಬಸಿರಾಗದು ಧರೆ!
ಅಂಬಿಗನಾಸರೆಯಿಂದಲೇ ದೋಣಿ,
ದಡ ಸೇರುವುದು ಮುಳುಗದೇ...
ಬರಿಯ ನೆನಪುಗಳ ಜೊತೆಗೂಡಿ,
ಬಾಳುವುದೆಂತು ಹೇಳೋ ನರ-ಹರಿಯೆ?

ದಿನಕರನ ಪ್ರಭೆಯಿಂದಲೇ
ಬೆಳ್ಳಿಯ ಕಿರಣ ಸೂಸುವ ಶಶಿ,
ಹಾಯಿ ಹೋಣಿಗಿದ್ದರೊಂದು ಹುಟ್ಟು
ಸೇರಬಲ್ಲೆವು ನಾವೆ ದೂರ ತೀರ!
ನಿನ್ನೆ-ನಾಳೆಗಳ ನಡುವಿರುವ ಇಂದು,
ಸಾಗಲೇ ಬೇಕಿದೆ ಭೂತಕ್ಕೆ ಬೆನ್ನಾಗಿ,
ಭವಿತವ್ಯಕೆ ಮೊಗಮಾಡಿ.

-ತೇಜಸ್ವಿನಿ ಹೆಗಡೆ

2 ಕಾಮೆಂಟ್‌ಗಳು:

Swarna ಹೇಳಿದರು...

ತುಂಬಾ ಇಷ್ಟ ಆಯ್ತು.
ಇಂದು ನೆನ್ನೆಗೆ ಬೆನ್ನು ಮಾಡಿ ನಾಳಿನತ್ತ ಒಂದು ಭರವಸೆಯ ಮೊಗ ಮಾಡಿ
ಸಾಗ ಬೇಕು. ಚಂದ ಹೇಳಿದಿರಿ.

sunaath ಹೇಳಿದರು...

ತೇಜಸ್ವಿನಿ,
ಊರಲ್ಲಿರಲಿಲ್ಲ. ಹೀಗಾಗಿ ನಿಮ್ಮ ಕವನವನ್ನು ನೋಡುವುದಕ್ಕೆ ತಡವಾಯಿತು. ಸುಂದರವಾದ ಕವನವನ್ನು ರಚಿಸಿದ್ದೀರಿ. ಅಭಿನಂದನೆಗಳು.