ಶನಿವಾರ, ನವೆಂಬರ್ 30, 2013

ಮಿರ್ಚಾನ ಬಂಗಾಲದ ರಾತ್ರಿಗಳಲ್ಲಿ(Bengal Nights) ತುಂಬಿದ್ದ ಹುಸಿಗತ್ತಲ ಕೆಡವಿ, ಆಂತರ್ಯದ ಬೆಳಕಲ್ಲಿ ಮೈತ್ರೇಯಿ ದೇವಿ ಕಾಣಿಸುವ ಪರಮ ಸತ್ಯ.

"ಅಪ್ರಿಯವಾದ ಸತ್ಯವನ್ನು ಒಪ್ಪಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅಪ್ರಿಯವಾದ ಸುಳ್ಳನ್ನು ಎದುರಿಸುವ ಬಗೆಯಾದರೂ ಹೇಗೆ?" ಎಂದು ಪ್ರಶ್ನಿಸುತ್ತಾ, ಅದನ್ನು ಎದುರಿಸುವ ವಿನೂತನ ಬಗೆಯನ್ನೂ ನಮಗೆ ತೋರುವ ವಿಶಿಷ್ಟ ಕಾದಂಬರಿ ‘ನ ಹನ್ಯತೆ’. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಗೀತಾ ವಿಜಯ ಕುಮಾರ್.


ಕಲ್ಪನೆಗಳಿಂದ, ಭ್ರಮೆಯಲ್ಲಿ ಹುಟ್ಟಿಸಿದ ಅಸತ್ಯದಿಂದ ಚಾರಿತ್ರ್ಯವಧೆಯನ್ನು ಮಾಡಿದಾಗ ಅಪಾರ ಯಾತನೆ, ನೋವು, ಸಂಕಟ, ಆಕ್ರೋಶ ಎಲ್ಲವೂ ನಮ್ಮನ್ನು ಹಿಂಡುತ್ತವೆ. ಸುಳ್ಳಿಗಿರುವ ಸಾಕ್ಷಿಯೆಂದರೆ ಅರೆಬೆಂದ ಸತ್ಯಗಳಿಂದ ಹಣೆದ ಘಟನೆಗಳು ಅಷ್ಟೇ! ಅದು ಬಹುಮುಖವುಳ್ಳದ್ದು. ಆದರೆ ಸತ್ಯ ಏಕ ಮುಖ. ಎಲ್ಲವನ್ನೂ ಕೇವಲ ಘಟನೆಗಳಿಂದ ಅರ್ಥಮಾಡಿಕೊಳ್ಳಲು ಸಾಧ್ಯವೇ? ಕೇವಲ ತರ್ಕಗಳಿಂದ ಸತ್ಯವನ್ನು ಅರಿಯಲು ಸಾಧ್ಯವೇ? ಸತ್ಯ ಕೇವಲ ಸತ್ಯವಾಗಿರುತ್ತದೆ. ‘ನೀನು ನಿರ್ಲಿಪ್ತತೆಯಿಂದ ನಿನ್ನ ಮನಸ್ಸನ್ನು ಬಿಚ್ಚಿ ಕಿವಿಯಾಲಿಸಿದರೆ, ಖಂಡಿತ ನಿನಗೆ ಸತ್ಯದ ಪ್ರತಿಧ್ವನಿ ಕೇಳಿಸುತ್ತದೆ’ ಎನ್ನುತ್ತದೆ ‘ನ ಹನ್ಯತೆ’ ಕಾದಂಬರಿ. ನಿಜ, ಈ ಕಾದಂಬರಿಯುದ್ದಕ್ಕೂ ತುಂಬಿರುವುದು ಸತ್ಯದ ಬೆಳಕೊಂದೇ. ನಾನು ಮಿರ್ಚಾ ಇಲಿಯೇಡ(Mircea Eliade)"Bengal Nights” ಕಾದಂಬರಿಯನ್ನು ಓದಿಲ್ಲ. ಆದರೆ ‘ನ ಹನ್ಯತೆ'ಯನ್ನೋದಿದ ಮೇಲೆ ಅಂತರ್ಜಾಲದ ತುಂಬೆಲ್ಲಾ ಜಾಲಾಡಿದೆ. ತಿಳಿದವರಲ್ಲಿ ಚರ್ಚಿಸಿದೆ. ಯೂ ಟ್ಯೂಬ್‌ನಲ್ಲಿ ಮಿರ್ಚಾನ ಕಾದಂಬರಿಯಾಧಾರಿತ ಬೆಂಗಾಲಿ ನೈಟ್ಸ್ ಎಂಬ ಚಲನಚಿತ್ರವನ್ನೂ ನೋಡಲೆತ್ನಿಸಿದೆ. ಆದರೆ ಸಂಪೂರ್ಣ ಚಿತ್ರವನ್ನು ನೋಡಲು ಆಗದೇ, ಸೋತೆ. ಕಾರಣ ನಾನು `ನ ಹನ್ಯತೆ'ಯನ್ನು ಓದಿದ ನಂತರ ನೋಡತೊಡಗಿದ್ದೆ. ನನಗೆ ಚಲನಚಿತ್ರದ ತುಂಬೆಲ್ಲಾ ಸಂಪೂರ್ಣ ಸುಳ್ಳು, ಭ್ರಮೆಗಳು ತುಂಬಿದ್ದು ಸ್ಪಷ್ಟವಾಗಿತ್ತು. ಸತ್ಯದ ಬೆಳಕನ್ನು ನೋಡಿದ ಮೇಲೆ ಸುಳ್ಳಿನ ಕತ್ತಲು ಅದೆಂತು ಇಷ್ಟವಾಗುವುದು? ‘ನ ಹನ್ಯತೆ’ಯ ಪ್ರಖರತೆ ಅಂತಹದ್ದು!

ಕಥೆಯ ಹಿನ್ನಲೆ :- ಮಿರ್ಚಾ ಇಲಿಯೇಡ ೧೯೨೮-೩೧ರವರೆಗೆ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ತತ್ವಶಾಸ್ತ್ರ ಮತ್ತು ಸಂಸ್ಕೃತ ವಿಷಯಗಳನ್ನು ಅಭ್ಯಸಿಸದವ. ಆ ಸಮಯದಲ್ಲಿ ಕಲ್ಕತ್ತೆಯಲ್ಲಿದ್ದ ತತ್ತ್ವಶಾಸ್ತ್ರ ಪಂಡಿತ ಸುರೇಂದ್ರನಾಥ್ ದಾಸ್‌ಗುಪ್ತ ಎನ್ನುವವರ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಈ ಸಮಯದಲ್ಲೇ ಅವರ ಮಗಳಾದ ಮೈತ್ರೇಯಿ ದೇವಿಯವರ ಪರಿಚಯವಾಗಿ, ಸ್ನೇಹವಾಗಿ, ಆಕರ್ಷಣೆ ಸೆಳೆದು, ಪ್ರೀತಿ ಬೆಳೆಯಿತು. ಆದರೆ ಇವರ ಪ್ರೇಮಕ್ಕೆ ತಂದೆಯ ಬೆಂಬಲ ಸಿಗದೇ ಇವರಿಬ್ಬರು ಬೇರ್ಪಡಬೇಕಾಯಿತು. ಅದೇ ನೋವಲ್ಲಿ ಮಿರ್ಚಾ ಹಿಮಾಲಯ, ಉತ್ತರಪ್ರದೇಶಗಳಲ್ಲಿ ತುಸು ಕಾಲ ಅಲೆದು ತಂದನಂತರ ತಾಯ್ನಾಡಿಗೆ ತೆರಳಿ, ತನ್ನ ಭಗ್ನ ಪ್ರೇಮದ ಮೇಲೆ ಒಂದು ಕಾದಂಬರಿ ಬರೆಯುತ್ತಾನೆ. ೧೯೩೩ರಲ್ಲಿ ಮೊದಲ ಬಾರಿ ರೋಮೇನಿಯನ್ ಭಾಷೆಯಲ್ಲಿ ಪ್ರಕಟಗೊಂಡ "ಮೈತ್ರೇಯಿ" ಕಾದಂಬರಿಯು ಮುಂದೆ ಇಟೆಲಿ, ಜರ್ಮನ್, ಫ್ರೆಂಚ್, ಸ್ಪಾನಿಶ್ ಭಾಷೆಗಳಲ್ಲಿ ಭಾಷಾಂತರಗೊಂಡಿತು.

 ಮೈತ್ರೇಯಿ ದೇವಿ
Courtesy : http://mupadhyahiri.blogspot.in
ಈ ನಡುವೆ ಮೈತ್ರೇಯಿ ದೇವಿಯವರು ತಮ್ಮ ಪ್ರೇತಿಯ ವಿರಹದ ನೋವನ್ನು ಸಹಿಸುತ್ತಾ, ಕಾಲನೊಂದಿಗೆ ಮುನ್ನಡೆಯುತ್ತಾ, ತನಗಿಂತ ಹದಿನಾಲ್ಕು ವರ್ಷ ದೊಡ್ಡವರಾಗಿದ್ದ ಮನಮೋಹನ ಸೇನ್‌ರೊಡನೆ ವಿವಾಹವಾಗುತ್ತಾರೆ. ಪತಿಯ ನಿರ್ವಾಜ್ಯ ಪ್ರೇಮ, ಸಹಕಾರ, ಸಾಂತ್ವನದಲ್ಲಿ ನೋವ ಸರಿಸಿ, ಜೀವನ್ಮುಖಿಯಾಗುತ್ತಾರೆ. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದ ಮೈತ್ರೇಯಿ ದೇವಿಯವರಿಗೆ ೪೦ ವರ್ಷಗಳ ತರುವಾಯ, ಮಿರ್ಚಾನ ದೇಶದಿಂದ ಬಂದ ಅವರಿವರಿಂದ, ಭಾರತಕ್ಕೆ ಭೇಟಿ ನೀಡಿದ ಇಲಿಯೇಡ‌ನ ಶಿಷ್ಯರಿಂದ, ತನ್ನ ಮೇಲೆ ಮಿರ್ಚಾ ಬರೆದ ಆತ್ಮ ಚರಿತ್ರೆಯ ಕುರಿತು ಮಾಹಿತಿ ದೊರಕುತ್ತದೆ. ಅವಳನ್ನು ಅತೀವ ಯಾತನೆಗೆ, ಆಘಾತಕ್ಕೆ ಒಳಮಾಡಿದ್ದು, ಆತ ತನ್ನ ಒಪ್ಪಿಗೆಯಿಲ್ಲದೇ, ತನ್ನ ಮೇಲೆ ಕಾದಂಬರಿ ಬರೆದನೆಂದಲ್ಲಾ. ಅದರಲ್ಲಿ ಇಲ್ಲ ಸಲ್ಲದ ಕಪೋಕಲ್ಪಿ ಅತಿ ರಂಜಿತ ಅರ್ಧ ಸತ್ಯವನ್ನು ಬರೆದು ತನ್ನ ಚಾರಿತ್ರ್ಯ ಹರಣ ಮಾಡಿದ್ದು ತಿಳಿದು, ಸುಪ್ತವಾಗೆಲ್ಲೋ ಮನದ ಆಳದಲ್ಲಿ ಗಟ್ಟಿಯಾಗಿದ್ದ ೪೦ ವರ್ಷದ ಹಿಂದಿನ ನೆನಪುಗಳೆಲ್ಲಾ ಸಡಿಲವಾಗಿ, ಕರಗಿ, ನೀರಾಗಿ, ಮೇಲ್ಪದರಕ್ಕೆ ಬಂದು ಅವಳ ದೇಹ ಹಾಗೂ ಮನಸ್ಸನ್ನು ವಿಚ್ಛೇದಿಸಿ, ಆಕೆ ಏಕ ಕಾಲದಲ್ಲೇ ೧೯೭೨ನೇ ಇಸವಿಯಲ್ಲೂ, ೧೯೩೦ನೇ ಇಸವಿಯಲ್ಲೂ ಜೀವಿಸುವಂತೆ ಇಬ್ಭಾಗಿಸಿ ಎಲ್ಲವೂ ಅಕ್ಷರ ರೂಪದಲ್ಲಿ ಹರಿದು ಸತ್ಯವನ್ನು ಪ್ರಕಾಶಿಸುತ್ತಾ ಆ ಮೂಲಕ ವಾಸ್ತವಿಕತೆ ಎದುರಿಟ್ಟು, ಮಿರ್ಚಾನ ಅವಾಸ್ತಿವಿಕತೆಯನ್ನು ತೊಡೆದುಹಾಕತೊಡಗುತ್ತದೆ... ಹಂತ ಹಂತವಾಗಿ, ಸಾಲು ಸಾಲಿನಲ್ಲೂ, ಘಟನೆಯಿಂದ ಘಟನೆಯ ಮೂಲಕ ಪದರ ಪದರವಾಗಿ, ಪ್ರತಿ ಅಕ್ಷರದಲ್ಲೂ ಹರಿದು ಮನಸ್ಸನ್ನು ಆರ್ದ್ರಗೊಳಿಸುತ್ತದೆ. ‘ನ ಹನ್ಯತೆ’ಯಲ್ಲೆಲ್ಲೂ ಅಂಥದ್ದೇನನ್ನು ಮಿರ್ಚಾ ತನ್ನ ಬೆಂಗಾಲಿ ನೈಟ್ಸ್‌ನಲ್ಲಿ ಬರೆದಿದ್ದ? ಅನ್ನೋದನ್ನು ಆಕೆ ಸ್ಪಷ್ಟವಾಗಿ ಹೇಳೊಲ್ಲಾ. ಎಲ್ಲೂ ಆಕೆ ತಾನು ಆ ಪುಸ್ತಕವನ್ನೋದಿದೆ ಎನ್ನುವುದೂ ಓದುಗರಿಗೆ ತಿಳಿಸುವುದಿಲ್ಲ. ಆದರೆ ನಾನು ಮಾಹಿತಿಗಳನ್ನರಸಿ ಹೋದಾಗ, ಆಕೆ ಅದನ್ನೋದಿ, ಸಂಕಟ ಪಟ್ಟು, ನ ಹನ್ಯತೆ ಬರೆದದ್ದಲ್ಲದೇ ಆಮೇಲೆ ಅವನಿದ್ದಲ್ಲಿ ಹೋಗಿ ಮಿರ್ಚಾನನ್ನು ಅನೇಕ ಸಲ ಭೇಟಿಮಾಡಿದ್ದ ದಾಖಲೆಗಳೂ ಸಿಗುತ್ತವೆ. ಆ ಸಮಯದಲ್ಲೇ ಆಕೆ ಮಿರ್ಚಾನಲ್ಲಿ ಮಾತು ತೆಗೆದುಕೊಂಡಿದ್ದಳಂತೆ ಅವನ ಕಾದಂಬರಿ ಅವಳ ಜೀವಿನಾವಧಿಯವರೆಗೂ ಇಂಗ್ಲೀಷಿನಲ್ಲಿ ಭಾಷಾಂತರಗೊಳ್ಳಬಾರದೆಂದು. ಅಂತೆಯೇ ೧೯೯೦ರಲ್ಲಿ ಮೈತ್ರೇಯಿ ದೇವಿಯವರ ದೇಹಾಂತವಾದ ಮೇಲೆ ೧೯೯೫ರಲ್ಲಿ ಚಿಕಾಗೋ ಯುನಿವರ್ಸಿಟಿಯು ಮಿರ್ಚಾನ ಕಾದಂಬರಿ "ಮೈತ್ರೇಯಿ"ಯನೂ ಮತ್ತು ಅದಕ್ಕುತ್ತರವಾಗಿ ಬಂದ ಮೈತ್ರೇಯಿಯವರ "ನ ಹನ್ಯತೆ"ಯನ್ನು ಇಂಗ್ಲೀಷಿನಲ್ಲಿ ಕ್ರಮವಾಗಿ "Bengal Nights" ಮತ್ತು "It Does Not Die" ಕಾದಂಬರಿಗಳಾಗಿ ಪ್ರಕಟಿಸಿತು. ಮಿರ್ಚಾ ಅದೆಷ್ಟು ಕೆಟ್ಟದಾಗಿ ಅವಳನ್ನು ಚಿತ್ರಿಸಿದ್ದ ಎನ್ನುವುದನ್ನು ನೀವು ಅಂತರ್ಜಾಲದಲ್ಲಿ ಮತ್ತು ಸ್ಥೂಲವಾಗಿ ಸುನಾಥ ಕಾಕಾರ "ಸಲ್ಲಾಪ" ಬ್ಲಾಗಿನಲ್ಲಿ ಓದಬಹುದು.

ಕಾದಂಬರಿಯ ಜೀವಾಳ :- ಇಡೀ ಕಾದಂಬರಿಯ ಅಂತಃಸತ್ವವೇ ಕಥಾ ನಾಯಕಿ "ಅಮೃತ". ಹೌದು... ಮೈತ್ರೇಯಿ ದೇವಿಯವರು ತನ್ನ ಕಾದಂಬರಿಯ ನಾಯಕಿಗೆ ಕೊಟ್ಟ ಹೆಸರು ‘ಅಮೃತ‘. ಅಮೃತಳನ್ನು ಮನೆಯವರೆಲ್ಲಾ ‘ರೂ’ ಎಂದು ಕರೆಯುತ್ತಿದ್ದರು. ಮಿರ್ಚಾ ಅವರಲ್ಲಿಗೆ ಬಂದಾಗ ರೂಳಿಗೆ ೧೬ ವರ್ಷ ಹಾಗೂ ಆತನಿಗೆ ೨೩ ವರ್ಷ. ರೂ, ಮಿರ್ಚಾನಿಗೆ ಸಂಸ್ಕೃತವನ್ನೂ, ಆತ ಅವಳಿಗೆ ಪ್ರೆಂಚ್ ಭಾಷೆಯನ್ನೂ ಕಲಿಸುತ್ತಿದ್ದ. ರೂಳಿಗೆ ರವೀಂದ್ರನಾಥರ ಮೇಲೆ ಅಪಾರ ಶ್ರದ್ಧೆ, ಭಕ್ತಿ, ಅಭಿಮಾನ. ಅವಳ ಪ್ರಥಮ ಕವನ ಸಂಕಲನ ಉದಿತಕ್ಕೆ ಮುನ್ನುಡಿಬರೆದವರೂ ರವೀಂದ್ರರೇ. ಷೋಡಶಿ ರೂ, ತರುಣ ಮಿರ್ಚಾನ ಆಕರ್ಷಣೆಗೆ ಒಳಗಾಗಿಯೂ ಮುಳುಗದೇ ಸಂಭಾಳಿಸಿಕೊಂಡು, ಮಿರ್ಚಾನನ್ನೂ ಸಂಭಾಳಿಸುತ್ತಾ, ಅಪ್ಪನ ಪ್ರತಿಷ್ಠೆಯ ದಾಹಕ್ಕೆ ಬಗ್ಗಿಯೂ ಕುಗ್ಗದೇ, ಕವಿ-ಕಾವ್ಯದ ನಡುವೆ ಬದುಕುತ್ತಾ, ಉಸಿರಾಡುತ್ತಾ, ವಿರಹದಲ್ಲಿ ಬೆಂದು, ತಪಸ್ವಿನಿಯಾಗಿ ಹೊರಬಂದು ಅದೆಂತು ಬೆಳೆದು ಬೆಳಕಾಗಿ, ಅಮೃತಳಾದಳು, ಅಮರಳಾದಳು ಎನ್ನುವುದನ್ನು ‘ನ ಹನ್ಯತೆ’ ಕಾಣಿಸುತ್ತದೆ. ಇಡೀ ಕಾದಂಬರಿಯಲ್ಲಿ ಆಕೆ ಎಲ್ಲಿಯೂ ಮಿರ್ಚಾನನ್ನು ದೂಷಿಸುವುದಿಲ್ಲ, ತುಚ್ಛವಾಗಿ ಅವಹೇಳನ ಮಾಡುವುದೂ ಇಲ್ಲ, ಅವನ ಮೇಲೆ ಅಪಾರ ಸಹಾನುಭೂತಿ, ಅನುಕಂಪ ಅದೇ ನಿರ್ಮಲ ಪ್ರೇಮವನ್ನೇ ಪ್ರಕಟಿಸುತ್ತಾಳೆ. ಅವನ ಅಪಾದನೆಗಳನ್ನು ಸೂಕ್ಷ್ಮವಾಗಿ ಪ್ರಕಟಿಸಿ, ತನ್ನೊಳಗಿನ ಯಾತನೆ, ಸಂಕಟ, ಆಘಾತ, ನೋವುಗಳ ಹೊರಹಾಕುತ್ತಾ, ಗತ ಬದುಕಿನ ಜೊತೆ ಜೊತೆಗೆ ವಾಸ್ತವವನ್ನು ಸಮ್ಮಿಳಿಸಿ ಕಥೆ ನಿರೂಪಿಸುವ ಅವಳ ಶೈಲಿಯೊಳಗಿನ ಅಪಾರ ಸಂಯಮ, ಶಿಸ್ತು, ಧೀರತೆಯೇ ಅವನಿಗೆ ಅತಿ ದೊಡ್ಡ ಪೆಟ್ಟನ್ನು ಕೊಡುತ್ತದೆ. ಸುಳ್ಳನ್ನು ತೊಡೆದುಹಾಕಲು ಸತ್ಯಕ್ಕೊಂದೇ ಸಾಧ್ಯ. ಅದಕ್ಕೆ ಸಾವಿಲ್ಲ ಅನ್ನೋದನ್ನು ಸ್ಪಷ್ಟವಾಗಿ, ಖಡಾಖಂಡಿತವಾಗಿ, ನೇರವಾಗಿ ನಿರೂಪಿಸಿದ್ದಾಳೆ. ಎಲ್ಲಾ ಓರೆ, ಕೋರೆಗಳ ನಡುವೆ ನೇರವಾಗಿ, ಅಖಂಡವಾಗಿ ನಿಲ್ಲುವ ಅವಳ ವ್ಯಕ್ತಿತ್ವದ ಛಾಪು, ಆಕೆಯ ಮನದೊಳಗಿನ ನಿರ್ಮಲತೆ, ಅವಳು ಕಾಣಿಸುವ ತತ್ತ್ವದರ್ಶನಗಳು ಎಲ್ಲವೂ ವಿಶಿಷ್ಟ ಅನುಭೂತಿಯನ್ನು ನಮ್ಮೊಳಗೆ ತುಂಬುತ್ತದೆ.

ಅದೇ ಮಿರ್ಚಾ ತನ್ನ "ಮೈತ್ರೇಯಿ’ ಕಾದಂಬರಿಯಲ್ಲಿ ಅತಿ ಕೆಟ್ಟದಾಗಿ ಅವಳನ್ನು ಚಿತ್ರಿಸಿರುವುದು ಕಂಡು ಬರುತ್ತದೆ. ಅಂತರ್ಜಾಲದ ಮೊರೆ ಹೋದಾಗ ಅವನೊಳಗಿನ ವಿಕಾರತೆ ಸ್ಪಷ್ಟವಾಗುತ್ತದೆ. ರವೀಂದ್ರರ ವ್ಯಕ್ತಿತ್ವ, ಪಾಂಡಿತ್ಯ, ಆಸ್ತಿಕತೆಯ ಅರಿವಿದ್ದೂ, ಅಸೂಯಾಪರನಾಗಿದ್ದ ಮಿರ್ಚಾ ಅವಳನ್ನು ಸಂದೇಹಿಸುತ್ತಾನೆ, ಮತ್ತು ತನ್ನ ಆತ್ಮಚರಿತ್ರೆಯಲ್ಲಿ ಅವರಿಬ್ಬರ ನಡುವೆ ಕಲ್ಪನಾತೀತ ಸಂಬಂಧ ಕಲ್ಪಿಸಿ ಮೈತ್ರೇಯಿ ದೇವಿಯನ್ನು ಘಾಸಿಗೊಳಿಸುತ್ತಾನೆ. ಸುಳ್ಳಿನ ಸಾವಿರ ಕೋಲಿಗೆ ಸತ್ಯದ ಒಂದೇ ಕೊಡಲಿ ಸಾಕಾಗುತ್ತದೆ ಮುರಿದುಹಾಕಲು, ಪುಡಿಮಾಡಲು. ಆ ಸತ್ಯದ ಅರಿವು ಈ ಪುಸ್ತಕದಲ್ಲಿ ನಾವು ಮಿರ್ಚಾನ ಬೆಂಗಾಲಿ ನೈಟ್ಸ್ ಓದದೆಯೂ ಅನುಭವವಾಗುತ್ತದೆ. ಇದೇ ಪುಸ್ತಕದಲ್ಲಿ ಒಂದು ಕಡೆ ಯಾಜ್ಞವಲ್ಕ್ಯರ ಮಾತೊಂದು ಉಲ್ಲೇಖಗೊಂಡಿದೆ. ‘ಮನುಷ್ಯ ಬೇರೆಯವರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ. ತನಗೆ ತಾನೇ ಎಲ್ಲವನ್ನೂ ಕೊಟ್ಟು ಕೊಳ್ಳುತ್ತಾನೆ.’ - ಇದು ಅಕ್ಷರಶಃ ಸತ್ಯ. ಮಿರ್ಚಾ ಕಟ್ಟಿಕೊಟ್ಟಿದ್ದೆಲ್ಲಾ ಅವನಿಗಾಗಿ, ಅವನೊಳಗಿನ ಕಲ್ಪನೆಗಾಗಿ, ಸಾಫಲ್ಯಗೊಳ್ಳದ ಅವನ ಕಾಮನೆ, ಕನಸುಗಳಿಗಾಗಿ. ಮೈತ್ರೇಯಿ ಕೊಟ್ಟಿದ್ದೆಲ್ಲಾ ಅವಳೊಳಗಿನ ಪ್ರಾಮಾಣಿಕತೆಯ ಪ್ರಮಾಣಕ್ಕಾಗಿ, ಸತ್ಯದ ಪರಿಮಾಣಕ್ಕಾಗಿ. ಇವರ್ಯಾರೂ ಯಾರಿಗೂ ಯಾವುದನ್ನೂ ಬರೆಯಲಿಲ್ಲ.. ತಮಗಾಗಿ ತಾವು ಬೆರೆದುಕೊಂಡಿದ್ದೇನೋ ಎನ್ನಿಸುತ್ತದೆ!

ಕಥೆಯಾರಂಭಿಸುವ ಮುನ್ನ ನಾಯಕಿ ಹೀಗೇ ಹೇಳುತ್ತಾಳೆ "ಪ್ರತಿಯೊಂದನ್ನು ಹಳೆಯದನ್ನಾಗಿಸುವುದೇ ಕಾಲನ ಕೆಲಸವೇ? ಯಾವುದೇ ಆಗಲಿ ಅದು ಹೊಸತಾಗಿಸುವುದಿಲ್ಲವೇ? ನನ್ನ ಮುಖವೇನೋ ಹಳತಾಗಿದೆ, ಆದರೆ ಮನಸ್ಸು? ಮಿರ್ಚಾ ಇಲಿಯೇಡ‍ನ ಬಗ್ಗೆ ತಿಳಿಯಲು ಹಾತೊರೆಯುತ್ತಿರುವ ನನ್ನ ಈ ಮನಸ್ಸೇ ಹೊಸದೆ? ಇದೂ ಕೂಡಾ ಕಾಲನ ಸೃಷ್ಟಿ ತಾನೆ? "He jests at scars that never felt a wound"  ಶೇಕ್ಸ್‌ಪಿಯರ್‌ನ ಈ ಹೇಳಿಕೆಯನ್ನು ಆಕೆ ತನ್ನ ಕಾದಂಬರಿಯಲ್ಲೊಂದು ಕಡೆ ಉಲ್ಲೇಖಿಸಿದ್ದಾಳೆ. ಅದನ್ನು ಆಕೆ ತನ್ನ ವಿಫಲಗೊಂಡ ಪ್ರೇಮಕ್ಕೆ ತಂದೆ ತೋರುವ ಉಡಾಫೆಯನ್ನು, ಸತಿ ಪದ್ಧತಿಗೆ ಸಂತಸಗೊಳ್ಳುವ ತನ್ನಜ್ಜಿಯನ್ನು ಕಂಡು ಆಕ್ರೋಶದಿಂದ ಬರೆದದ್ದು. ಆದರೆ ಈ ಮಾತು ಎಲ್ಲೋ ಮಿರ್ಚಾನಿಗೂ ಅನ್ವಯಿಸುತ್ತದೆ. ಅವನ ಕಂಡ ನೋವಿಗೂ, ಮೈತ್ರೇಯಿ ದೇವಿ ಕಂಡ ನೋವಿಗೂ ಸುಳ್ಳು, ಸತ್ಯದಷ್ಟೇ ಅಂತರವಿದೆ ಎಂದೆನಿಸಿಬಿಡುತ್ತದೆ.

ಮಿರ್ಚಾನ ಕಾದಂಬರಿಯಲ್ಲಿ ಕೇವಲ ಮೈತ್ರೇಯಿ ಮಾತ್ರ ತುಂಬಿಕೊಂಡಿರಬಹುದು, ಮೈತ್ರೇಯಿ ದೇವಿಯವರ ಕಾದಂಬರಿಯಲ್ಲಿ ಸತ್ಯದ ಸೌಂದರ್ಯ ತುಂಬಿದೆ. ತನ್ನ ಮತ್ತು ಮಿರ್ಚಾನ ನಡುವಿದ್ದ ಸಂಬಂಧ ಯಾವಥರದ್ದಾಗಿತ್ತು, ಅದರ ಪಾವಿತ್ರ್ಯತೆ ಎಂಥದ್ದಾಗಿತ್ತು ಎನ್ನುವುದನ್ನು ಆಕೆ ಯಾರೋ ಸ್ಪಷ್ಟ ಪಡಿಸಲೋಸುಗ ಬರೆದಿರುವಂತೆ ಭಾಸವಾಗುವುದಿಲ್ಲ. ಅವರು ಅವಳೊಳಗಿನ ‘ರೂ’ಗಾಗಿ ಮಾತ್ರ ಬರೆದುಕೊಂಡಂತಿದೆ. ಮದುವೆಯಾನಂತರ ಅವಳು ತನ್ನ ಪತಿಯ ಮೇರು ವ್ಯಕ್ತಿತ್ವವನ್ನು ಪರಿಚಯಿಸಿಕೊಡುವ ರೀತಿ, ಅವರ ವಾಸಸ್ಥಳವಾಗಿದ್ದ ಬಂಗಾಲದ ಒಂದು ಗುಡ್ಡಗಾಡಿನ ಕಣಿವೆಯ ಅಪಾರ ಸೌಂದರ್ಯವನ್ನು ಚಿತ್ರಿಸುವ ಪರಿ, ಹಳ್ಳಿಯವರ ಬವಣೆಗಳು, ಬ್ರಿಟೀಷರ ದೌರ್ಜನ್ಯ, ಕುಟಿಲತೆ, ಅವರ ಸ್ವದೇಶಿ ಪ್ರೇಮ, ಮದ್ಯಪಾನದ ವಿರುದ್ಧ ಆ ಕಾಲದಲ್ಲೇ ಆಕೆ ಸಾರುವ ಸಮರ, ಅನ್ಯಾಯಕ್ಕೆ ಬಗ್ಗದೇ, ಅಸತ್ಯಕ್ಕೆ ಕುಗ್ಗದೇ, ಕ್ಷಣಿಕ ಪ್ರಲೋಭನೆಗೆ ಒಳಗಾಗದೇ, ಸೆಟೆದು ನಿಂತು ಮಿನುಗುವ ಮೈತ್ರೇಯಿಯವರ ಪ್ರತಿಬಿಂಬವಾದ ಅಮೃತಾಳ ವ್ಯಕ್ತಿತ್ವಕ್ಕೆ ನಾನು ಮಾರುಹೋದೆ. 

ಗಮನ ಸೆಳೆದು ಕುತೂಹಲಕ್ಕೀಡು ಮಾಡುವ ಒಂದೆರಡು ಮಾಹಿತಿಗಳು :- ‘ತಿತಾಪತಿ’ ಎನ್ನೋ ಎಲೆಯನ್ನು ಕಿತ್ತು ನೀರಿಗೆ ಹಾಕಿದಾಗ, ಅದನ್ನು ತಿಂದ ಮೀನುಗಳು ಉನ್ಮತ್ತಗೊಂಡು ಗಾಳಕ್ಕೆ ಅದೆಂತು ಬೇಗ ಸಿಕ್ಕುವವು ಅನ್ನೋ ಬೆರಗು, ದಟ್ಟಕಾಡಿನಲ್ಲಿರುವ ಕಡುಗಪ್ಪು ಹುಲ್ಲುಗಳು (Moss), ಕಾಡಿನೊಳಗಿರುವ ಬೆಳಕನ್ನು ಹೊರಚೆಲ್ಲುವ ವಿಶಿಷ್ಟವಾದ ‘ಫಸ್‌ಫರಾಸೆಂಟ್’ ಗಿಡಗಳು, ಕಾಡಲ್ಲಿ ಸಿಗುವ ಡೇಲಿಯಾ ಹೂವಿನ ಥರದ್ದೇ ಒಂದು ಕೀಟ, ಕೊನೆಯಲ್ಲಿ ಬರುವ ‘ಪಂಡೋರ’ ಪಟ್ಟಿಗೆ!

ಕೊನೆಯದಾಗಿ :- ಕಾದಂಬರಿಯಲ್ಲೊಂದು ಕಡೆ ಮಿರ್ಚಾ ಅಮೃತಳಲ್ಲಿ ಹೇಳುತ್ತಾನೆ "ನಾನು ನಿನ್ನ ದೇಹವನ್ನಲ್ಲ, ಆತ್ಮವನ್ನು ಕಾಣ ಬಯಸುತ್ತೇನೆ" ಎಂದು. ಆದರೆ ಮಿರ್ಚಾ ತನ್ನ Bengal Nights ಕಾದಂಬರಿಯಲ್ಲಿ ಕಾಣಿಸಿದ್ದು ಅವಳ ದೇಹವನ್ನು ಮಾತ್ರ, ಆದರೆ ಮೈತ್ರೇಯಿ ದೇವಿಯ ಅಮೃತಾ ‘ನ ಹನ್ಯತೆ’ಯ ತುಂಬೆಲ್ಲಾ ತನ್ನ ಆತ್ಮದ ಬೆಳಕನ್ನು ಕಾಣಿಸಿ, ಕೊನೆಯಲ್ಲಿ ಮಿರ್ಚಾನ ಅಂಧತ್ವವನ್ನೂ ತೊಡೆದು ಹಾಕಿದ್ದರ ಸಂಕೇತವನ್ನು ಓದುಗರಿಗೆ ನೀಡುತ್ತಾಳೆ. ‘ಕುರುಡರಿಗೆ ಯಾವ ರೀತಿ ಬೆಳಕಿನ ಬಗ್ಗೆ ತಿಳಿಸೋದಕ್ಕಾಗೋದಿಲ್ವೋ, ಅದೇ ತರಹ ಆತ್ಮನ ಕುರಿತು ಯಾರಿಗೆ ಅರಿವಿಲ್ಲವೋ, ಅವರಿಗೆ ಅದರ ಬಗ್ಗೆ ತಿಳಿಸಿ ಹೇಳುವುದು ಕಷ್ಟ. ಈ ಅನುಭವ ತರ್ಕಕ್ಕೆ ಮೀರಿದ್ದು. ಅದನ್ನು ಮಾತಿನಿಂದ ಬಣ್ಣಿಸಲು ಸಾಧ್ಯವಿಲ್ಲ. ಬುದ್ಧಿಯಿಂದ ಅರ್ಥೈಸಲೂ ಸಾಧ್ಯವಿಲ್ಲ. “ನ ಮೇಧ ಯಾ ಬಹುಧಾನ ಶೃತೇನ". ಎಂದು ‘ನ ಹನ್ಯತೆ’ ಯ ಅಮೃತಾಳ ಮೂಲಕ ಮೈತ್ರೇಯಿ ದೇವಿ ಹೇಳಿಸುತ್ತಾರೆ. ಅದು ನೂರಕ್ಕೆ ನೂರು ಸತ್ಯ. ಅಂತೆಯೇ ಆಕೆ ಹೇಳುವಂತೇ ಪ್ರೇಮದಲ್ಲಿ ಅಮರತ್ವದ ಸಂಕೇತವಿದೆ, ಅದು ಶಾಶ್ವತ. ಪ್ರೇಮವಿದ್ದಲ್ಲಿ ಅತೃಪ್ತಿಯೂ ಇರುತ್ತದೆ. ಅದೇ ಅನಂತರ ಅರಿವನ್ನು ಮೂಡಿಸುತ್ತಿರುತ್ತದೆ. ಆ ಅರಿವನ್ನು ಪಡೆಯಲು ಕಲವೇ ಕೆಲವು ಮೈತ್ರೇಯಿ ದೇವಿಯರಿಗೆ ಸಾಧ್ಯ ಮತ್ತು ಹೆಚ್ಚಿನವರು ಮಿರ್ಚಾನಂತೇ ಕುರುಡರೇ ಆಗುರುತ್ತಾರೆ!?

ಸೂಚನೆ : ಕಾದಂಬರಿಯ ಮೊದಲು ಲೇಖಕಿ, ತುಂಬಾ ಅವಸರದಲ್ಲಿ ಪುಸ್ತಕ ಬರೆದಿರುವರಿಂದ ಮುದ್ರಣ ದೋಷವಾಗಿದೆ... ಅದಕ್ಕೆ ಕಾರಣ ತಾನೇ ಎಂದಿದ್ದಾರೆ. ಆದರೆ ಹಾಗೆ ಲೇಖಕಿ ಹೇಳಿದ್ದು ಬಂಗಾಲಿಯಲ್ಲಿ ಪ್ರಕಟಗೊಂಡ ತನ್ನ ಕಾದಂಬರಿಯಲ್ಲಿ. ಆದರೆ ಅದನ್ನು ಕನ್ನಡಕ್ಕೆ ಅನುವಾದಿಸಿದ ಗೀತಾ ವಿಜಯ ಕುಮಾರ್ ಅವರು ಯಥಾವತ್ತಾಗಿ ಅನುವಾದಿಸಿರುವಂತೆ ಕಾಣಿಸುತ್ತದೆ! ಮುದ್ರಣ ದೋಷಗಳು ಕನ್ನಡಲ್ಲೂ ಯಥೇಚ್ಛವಾಗಿವೆ. ಒಂದೆರಡು ಕಡೆ ಇಸವಿಯನ್ನೂ ತಪ್ಪಾಗಿ ಮುದ್ರಿಸಲಾಗಿದೆ. ಆದರೆ ಕಾದಂಬರಿಯ ಸತ್ಯತೆಯ ಪ್ರಖರ ಬೆಳಕಿನಡಿ ಇಂತಹ ತಪ್ಪುಗಳೂ ಒಪ್ಪುಗಳೇ ಆಗಿ ನಗಣ್ಯವಾಗಿ ಬಿಡುತ್ತವೆ.

 ‘ನ ಹನ್ಯತೆಯನ್ನು ನನ್ನಿಂದ ಸಶಕ್ತವಾಗಿ ಕಟ್ಟಿಕೊಡಲು ಆಗಿದೆ ಎನ್ನಲಾರೆ. ಆದರೆ ಬರೆಯುವ ತುಡಿತಕ್ಕೆ ಪ್ರಾಮಾಣಿಕತೆ ಒದಗಿಸಲು ಯತ್ನಿಸಿರುವೆ. ಕೆಲವು ಅನುಭೂತಿಗಳು ಅವರ್ಣನೀಯವೇ!

-ತೇಜಸ್ವಿನಿ.

7 ಕಾಮೆಂಟ್‌ಗಳು:

ಮನಸು ಹೇಳಿದರು...

ಇದನ್ನು ನಾನು ಈ ಸರಿ ಊರಿಗೆ ಹೋದಾಗ ತರಬೇಕು ಎಂದುಕೊಂಡಿದ್ದೆ. ಧನ್ಯವಾದಗಳು ತೇಜು ಒಂದೊಳ್ಳೆ ಪುಸ್ತಕದ ಬಗ್ಗೆ ತಿಳಿಸಿದ್ದೀರಿ.

ಸಿಂಧು sindhu ಹೇಳಿದರು...

ತೇಜಸ್ವಿನೀ..
ಮನುಷ್ಯ ಬೇರೆಯವರಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ. ತನಗೆ ತಾನೇ ಎಲ್ಲವನ್ನೂ ಕೊಟ್ಟು ಕೊಳ್ಳುತ್ತಾನೆ.

ನೀನು ಕಾದಂಬರಿಯ ಅಂತಃಸತ್ವವನ್ನೇ ಕಟ್ಟಿದ್ದೀ. ಉಳಿದಿದ್ದನ್ನು ಆಸಕ್ತರು ಓದಿಯೇ ಅನುಭವಿಸಬೇಕು.
ಒಂದು ಸಮರ್ಥ ಚಿತ್ರಣ. ಥ್ಯಾಂಕ್ಯೂ ಫಾರ್ ರಿಫೈನಿಂಗ್ ಅಂಡ್ ಡಿಸ್ಕ್ರೈಬಿಂಗ್ ಯುವರ್ ಥಾಟ್ಸ್..

ಪ್ರೀತಿಯಿಂದ, ಸಿಂಧು

sunaath ಹೇಳಿದರು...

ತೇಜಸ್ವಿನಿ,
ಕಾದಂಬರಿಯ ಆತ್ಮವನ್ನು ನಿಮ್ಮ ಲೇಖನದಲ್ಲಿ ಸೆರೆ ಹಿಡಿದಿದ್ದೀರಿ. ನಿಮ್ಮ ವ್ಯಾಖ್ಯಾನ ತುಂಬ ಇಷ್ಟವಾಯಿತು. ‘ಅಮೃತಾ’ ಎಂದರೆ (೧)ಸಾವಿಲ್ಲದವಳು ಹಾಗು (೨)ಸುಧೆ ಎನ್ನುವ ಅರ್ಥವನ್ನು ನಿಮ್ಮ ಲೇಖನದಲ್ಲಿ ಸ್ಪಷ್ಟಪಡಿಸಿದ್ದೀರಿ.
ಅಭಿನಂದನೆಗಳು.

Unknown ಹೇಳಿದರು...

ಸುನಾಥರ ಬ್ಲಾಗಿನಲ್ಲಿ ಇದನ್ನು ಓದಿದ್ದೆ. ನಿಮ್ಮ ಬರಹ ಕಾದಂಬರಿಯ ಜೀವಾಳವನ್ನು ಅಣು ಅಣುವಾಗಿ ತೆರೆ ತೆರೆದು ತೋರಿಸುತ್ತದೆ. ಭಾರತೀಯತೆಯ ಪ್ರತೀಕದಂತಿದೆ 'ನ ಹನ್ಯತೆ'
-Anil

Subrahmanya ಹೇಳಿದರು...

ಓದಬೇಕು. :)

ತೇಜಸ್ವಿನಿ ಹೆಗಡೆ ಹೇಳಿದರು...

@ಸುಗುಣಕ್ಕ, ಸುನಾಥ ಕಾಕಾ, ಸಿಂಧು, ಅನಿಲ್ -

ಮೆಚ್ಚಿ, ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು :)

-ತೇಜಸ್ವಿನಿ.

Swarna ಹೇಳಿದರು...

ಕಾದಂಬರಿಯ ವಿಶೇಷತೆಗಳನ್ನು , ಓದುಗರು ನಿಸಬೇಕಾದ ಅಂಶಗಳನ್ನು ಚೆನ್ನಾಗಿ ಮನದಟ್ಟು ಮಾಡಿದ್ದಿರಿ. ವಂದನೆಗಳು